ADVERTISEMENT

ಬೆಂಕಿಯೊಂದಿಗೆ ಆಟವಾಡಬೇಡಿ: ತೈವಾನ್ ವಿಚಾರದಲ್ಲಿ ಅಮೆರಿಕಕ್ಕೆ ಚೀನಾ ಎಚ್ಚರಿಕೆ

ಏಜೆನ್ಸೀಸ್
Published 29 ಜುಲೈ 2022, 4:11 IST
Last Updated 29 ಜುಲೈ 2022, 4:11 IST
   

ವಾಷಿಂಗ್ಟನ್: ತೈವಾನ್‌ ವಿಷಯಕ್ಕೆ ಸಂಬಂಧಿಸಿದಂತೆ ‘ಬೆಂಕಿಯೊಂದಿಗೆ ಆಟವಾಡಬೇಡಿ’ಎಂದು ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಜೊತೆಗಿನ ದೂರವಾಣಿ ಸಂಭಾಷಣೆ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎಚ್ಚರಿಸಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಚೀನಾವು ತನ್ನ ಭೂಪ್ರದೇಶದ ಭಾಗವೆಂದು ಪರಿಗಣಿಸುವ ತೈವಾನ್ ಕುರಿತಂತೆ ಚೀನಾ ಮತ್ತು ಅಮೆರಿಕ ನಡುವೆ ಸಂಘರ್ಷದ ವಾತಾವರಣ ಹೆಚ್ಚುತ್ತಿರುವುದರಿಂದ ಎರಡು ಗಂಟೆಗಳ ಕಾಲ ವರ್ಚುವಲ್ ಶೃಂಗಸಭೆ ನಡೆಯಿತು.

‘ಬೆಂಕಿಯೊಂದಿಗೆ ಆಟವಾಡುವವರು ಅಂತಿಮವಾಗಿ ಸುಟ್ಟುಹೋಗುತ್ತಾರೆ’ ಎಂದು ಕ್ಸಿ, ತೈವಾನ್ ಅನ್ನು ಉಲ್ಲೇಖಿಸಿ ಬೈಡನ್‌ ಅವರಿಗೆ ಹೇಳಿದರು ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ವರದಿ ಮಾಡಿದೆ. ಕಳೆದ ನವೆಂಬರ್‌ನಲ್ಲಿ ಅವರು ಮಾತನಾಡುವಾಗ ಅವರು ಬಳಸುತ್ತಿದ್ದ ಭಾಷೆಯನ್ನೇ ಬಳಸಿದ್ದಾರೆ.

ADVERTISEMENT

‘ಅಮೆರಿಕವು ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದೆ ಎಂದು ನಾನು ಭಾವಿಸುತ್ತೇನೆ’ಎಂದು ಕ್ಸಿ, ಬೈಡನ್‌ಗೆ ತಿಳಿಸಿದ್ದಾರೆ.

‘ತೈವಾನ್ ವಿಷಯದಲ್ಲಿ ಚೀನಾ ಸರ್ಕಾರ ಮತ್ತು ಜನರ ನಿಲುವು ಅಚಲವಾಗಿದೆ’ಎಂದು ಕ್ಸಿ ಉಲ್ಲೇಖಿಸಿದ್ದಾರೆ. ‘ಚೀನಾದ ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ಕಾಪಾಡುವುದು 1.4 ಶತಕೋಟಿ ಚೀನಿಯರ ದೃಢ ಸಂಕಲ್ಪವಾಗಿದೆ’ಎಂದು ಸ್ಪಷ್ಟಪಡಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಅಧ್ಯಕ್ಷರಾದ ಬಳಿಕ ಬೈಡನ್, ಜಿನ್‌‍ಪಿಂಗ್ ಜೊತೆ ನಡೆಸುತ್ತಿರುವ ಐದನೇ ಮಾತುಕತೆಯಾಗಿದೆ. ವ್ಯಾಪಾರ ಯುದ್ಧ ಮತ್ತು ತೈವಾನ್ ಕುರಿತ ಉದ್ವಿಗ್ನತೆಯ ಮಧ್ಯೆ ಉಭಯ ದೇಶಗಳ ನಡುವಿನ ಆಳವಾದ ಅಪನಂಬಿಕೆ ಗುಟ್ಟಾಗಿ ಉಳಿದಿಲ್ಲ.

ಅಮೆರಿಕದ ಪ್ರಜಾಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸದ್ಯದಲ್ಲೇ ತೈವಾನ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಅದರ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.

‘ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಆಕ್ರಮಣಕಾರಿ, ದಬ್ಬಾಳಿಕೆಯ ನಡವಳಿಕೆಯ ವಿಷಯಗಳು ನ್ಯಾನ್ಸಿ ಭೇಟಿಯ ಅಜೆಂಡಾಗಳಾಗಿವೆ’ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಅವರು ಹೇಳಿದ್ದಾರೆ.

ತೈವಾನ್‌ಗೆ ಅಮೆರಿಕದ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಪೆಲೊಸಿ ಪ್ರವಾಸವನ್ನು ಪ್ರಮುಖ ಪ್ರಚೋದನೆ ಎಂದು ಚೀನಾ ಪರಿಗಣಿಸಿದೆ. ಅಮೆರಿಕದ ಅಧ್ಯಕ್ಷರ ನಂತರ ಎರಡನೇ ಸಾಲಿನಲ್ಲಿ ನಿಲ್ಲುವ ಪೆಲೋಸಿ ಮಿಲಿಟರಿ ಸಾರಿಗೆಯೊಂದಿಗೆ ಪ್ರಯಾಣಿಸಬಹುದು.

‘ಪೆಲೋಸಿ ಪ್ರವಾಸವು ಮುಂದುವರಿದರೆ ವಾಷಿಂಗ್ಟನ್ ‘ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ಎಂದು ಚೀನಾ ಬುಧವಾರ ಎಚ್ಚರಿಸಿದೆ.

‘ಪೆಲೋಸಿ ಮಿಲಿಟರಿ ಬೆಂಬಲ ಕೇಳಿದರೆ, ಅವರಿಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ’ ಎಂದು ಅಮೆರಿಕದ ಸೇನಾಪಡೆಯ ಮುಖ್ಯಸ್ಥ ಜನರಲ್‌ ಮಾರ್ಕ್‌ ಮಿಲ್ಲೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾಸತ್ತಾತ್ಮಕ ತೈವಾನ್ ಮೇಲೆ ನಿಯಂತ್ರಣ ಸಾಧಿಸಲು ಕ್ಸಿ ತಮ್ಮ ಬಲವನ್ನು ಬಳಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಭಯ ವ್ಯಕ್ತಪಡಿಸಿದ್ದಾರೆ.

ಅಮೆರಿಕವು ತೈವಾನ್ ಅನ್ನು ರಕ್ಷಿಸುತ್ತದೆಯೇ ಎಂಬುದರ ಕುರಿತು ಬೈಡನ್ ಸಹ ಅಸ್ಪಷ್ಟ ಹೇಳಿಕೆ ನೀಡಿದ್ದರು. ಸದ್ಯ ಇರುವ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮೇ ತಿಂಗಳಲ್ಲಿ ಹೇಳಿದ್ದರು.

ಕ್ಸಿ ಅವರೊಂದಿಗಿನ ನಿಕಟ ಸಂಬಂಧದ ಬಗ್ಗೆ ಬೈಡನ್ ಹೆಮ್ಮೆಪಡುತ್ತಾರೆ. ಆದರೆ, ಕೋವಿಡ್ ನಿರ್ಬಂಧಗಳಿಂದಾಗಿ ಇಬ್ಬರೂ ಇನ್ನೂ ಮುಖಾಮುಖಿ ಭೇಟಿಯಾಗಿಲ್ಲ.

ಶ್ವೇತಭವನದ ಪ್ರಕಾರ, ಬೈಡನ್ ಅವರ ಮುಖ್ಯ ಗುರಿ ಎರಡು ಮಹಾಶಕ್ತಿಗಳ ನಡುವೆ ತಡೆಗೋಡೆ ನಿರ್ಮಿಸುವುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.