ADVERTISEMENT

ಕ್ವಾಡ್ ಸಭೆಗೂ ಮುನ್ನ ಗಾಲ್ವಾನ್ ಸಂಘರ್ಷದ ಬಗ್ಗೆ ಭಾರತ–ಚೀನಾ ವಾಕ್ಸಮರ

ಅನಿರ್ಬನ್ ಭೌಮಿಕ್
Published 25 ಸೆಪ್ಟೆಂಬರ್ 2021, 4:23 IST
Last Updated 25 ಸೆಪ್ಟೆಂಬರ್ 2021, 4:23 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ನವದೆಹಲಿ: ಅಮೆರಿಕದಲ್ಲಿ ಇಂಡೋ–ಪೆಸಿಫಿಕ್ ಪ್ರದೇಶದ ಭದ್ರತೆ ಕುರಿತಂತೆ ಕ್ವಾಡ್ ಸಭೆ ಆರಂಭಕ್ಕೂ ಕೆಲ ಗಂಟೆಗಳ ಮುನ್ನ ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯ ಸೇನಾ ಸಂಘರ್ಷದ ಕುರಿತಂತೆ ವಾಕ್ ಸಮರ ನಡೆದಿದೆ.

ಸಂಘರ್ಷಕ್ಕೆ ಭಾರತೀಯ ಸೇನೆ ಕಾರಣ ಎಂದು ಚೀನಾ ದೂಷಿಸಿದ್ದು, ಭಾರತ ಆರೋಪಗಳನ್ನು ಅಲ್ಲಗಳೆದಿದೆ.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಸಹಕಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತವು ಸರಣಿ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಒಪ್ಪಂದಗಳು ಗಡಿ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜಾವೊಲಿಜಿಯಾನ್ ಹೇಳಿದ್ದಾರೆ.

‘ಗಾಲ್ವಾನ್ ನದಿ ಕಣಿವೆಯಲ್ಲಿ ಕಳೆದ ವರ್ಷ ಸಂಭವಿಸಿದ ಸಂಘರ್ಷಕ್ಕೆ ಭಾರತವು ಎರಡು ದೇಶಗಳ ನಡುವಿನ ಒಪ್ಪಂದವನ್ನು ಉಲ್ಲಂಘಿಸಿದ್ದೇ ಕಾರಣ. ಅಕ್ರಮವಾಗಿ ಎನ್‌ಎಸಿ ದಾಟಿದ್ದ ಭಾರತವು, ಚೀನಾ ಪ್ರದೇಶವನ್ನು ಅತಿಕ್ರಮಿಸಿತ್ತು’ಎಂದು ಜಾವೊ ದೂಷಿಸಿದ್ದಾರೆ. ಉಭಯ ದೇಶಗಳು ಸಹಿ ಮಾಡಿದ ಒಪ್ಪಂದಗಳಿಗೆ ಭಾರತವು ಕಟಿಬದ್ಧವಾಗಿರಬೇಕು ಮತ್ತು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚೀನಾ ನಿರೀಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಚೀನಾದ ಆರೋಪಕ್ಕೆ ಮೋದಿ ಸರ್ಕಾರವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಭಾರತೀಯ ಸೇನೆಯ ಮೇಲೆ ಆರೋಪ ಹೊರಿಸುವ ಬೀಜಿಂಗ್ ಪ್ರಯತ್ನವನ್ನು ಅಲ್ಲಗಳೆದಿದೆ. ‘ನಾವು ಅಂತಹ ಹೇಳಿಕೆಗಳನ್ನು ತಿರಸ್ಕರಿಸುತ್ತೇವೆ. ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಕಳೆದ ವರ್ಷ ನಡೆದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿತ್ತು’ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಮ್ಮ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳಿಗೆ ವಿರುದ್ಧವಾಗಿ ಯಥಾಸ್ಥಿತಿ ಬದಲಿಸಲು ಚೀನಾದ ಕಡೆಯಿಂದ ನಡೆಯುತ್ತಿರುವ ಪ್ರಚೋದನಕಾರಿ ನಡವಳಿಕೆ ಮತ್ತು ಏಕಪಕ್ಷೀಯ ಪ್ರಯತ್ನಗಳು ಶಾಂತಿ ಮತ್ತು ನೆಮ್ಮದಿಯ ಗಂಭೀರ ಅಡಚಣೆಗೆ ಕಾರಣವಾಯಿತು. ಇದು ದ್ವಿಪಕ್ಷೀಯ ಸಂಬಂಧಗಳ ಮೇಲೂ ಪರಿಣಾಮ ಬೀರಿದೆ’ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

‘ಚೀನಾವು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರೋಟೊಕಾಲ್‌ಗಳನ್ನು ಸಂಪೂರ್ಣವಾಗಿ ಅನುಸರಿಸುವ ಮೂಲಕ ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಕೆಲಸ ಮಾಡಬೇಕು ಎಂಬುದು ಭಾರತದ ಇಚ್ಛೆಯಾಗಿದೆ’ಎಂದು ಈ ತಿಂಗಳ ಆರಂಭದಲ್ಲಿ ದುಶಾಂಬೆಯಲ್ಲಿ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವರಿಗೆ ಸೂಚಿಸಿದ್ದನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

15 ತಿಂಗಳ ಹಿಂದೆ ನಡೆದ ಗಾಲ್ವಾನ್ ಕಣಿವೆಯ ಹಿಂಸಾತ್ಮಕ ಸಂಘರ್ಷದಲ್ಲಿ ಭಾರತೀಯ ಸೇನೆಯು ತನ್ನ 20 ಸೈನಿಕರನ್ನು ಕಳೆದುಕೊಂಡಿತ್ತು. ಚೀನಾದ ಪಿಎಲ್‌ಎ ಸಹ ಸಾವುನೋವುಗಳನ್ನು ಅನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.