ನವದೆಹಲಿ: ಅಫ್ಗಾನಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವ ವಿದೇಶಿ ಭಯೋತ್ಪಾದಕ ಪಡೆಗಳು ಮಧ್ಯ ಏಷ್ಯಾ ಮತ್ತು ಭಾರತಕ್ಕೆ ಗಂಭೀರ ಬೆದರಿಕೆ ಒಡ್ಡಲಿವೆ ಎಂದು ಭಾರತ ಮತ್ತು ರಷ್ಯಾ ಆತಂಕ ವ್ಯಕ್ತಪಡಿಸಿವೆ. ಜೊತೆಗೆ, ಭಯೋತ್ಪಾದಕ ವಿರೋಧಿ ಸಹಕಾರವನ್ನು ಇನ್ನಷ್ಟು ಬಲಪಡಿಸುವುದಾಗಿ ನಿರ್ಣಯ ತೆಗೆದುಕೊಂಡಿವೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ರಷ್ಯಾದ ಭದ್ರತಾ ಮಂಡಳಿ ಕಾರ್ಯದರ್ಶಿ ನಿಕೋಲಯ್ ಪತ್ರುಶೆವ್ ಬುಧವಾರ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಭಾರತ ಮತ್ತು ರಷ್ಯಾ ತೀವ್ರ ಆತಂಕ ವ್ಯಕ್ತಪಡಿಸಿವೆ. ಮೂಲಭೂತ ಹಕ್ಕುಗಳು ಮತ್ತು ಮಹಿಳೆಯರ ಹಕ್ಕುಗಳಿಗೆ ಗೌರವ ನೀಡುವುದಾಗಿ ಹಾಗೂ ಭಯೋತ್ಪಾದಕ ಪಡೆಗಳು ಅಫ್ಗನ್ ನೆಲವನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ಭರವಸೆ ನೀಡಿತ್ತು. ಅಫ್ಗನ್ನರಿಗೆ ತಾಲಿಬಾನ್ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಮಾಡಬೇಕು ಎಂದು ಉಭಯ ದೇಶಗಳು ಒತ್ತಾಯಿಸಿವೆ.
ಪಾಕಿಸ್ತಾನದಿಂದ ಕಾರ್ಯಾ
ಚರಣೆ ಮಾಡುವ ಉಗ್ರ ಸಂಘಟ
ನೆಗಳು ಭಾರತದ ಮೇಲೆ ದಾಳಿ ನಡೆಸಲು ಅಫ್ಗನ್ ನೆಲವನ್ನು ಬಳಸಿ
ಕೊಳ್ಳಬಹುದು ಎಂದು ಭಾರತ ಹೇಳಿದೆ. ಇಂಥ ಘಟನೆಗಳು ನಡೆದರೆ ತಾಲಿಬಾನ್ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಕಾರಣಕ್ಕೆ ಪಾಕಿಸ್ತಾನವನ್ನು ಇದಕ್ಕೆ ಜವಾಬ್ದಾರ ಆಗಿಸಬೇಕು ಎಂದು ಭಾರತ ಹೇಳಿದೆ. ಈ ಚರ್ಚೆಯ ಜೊತೆಗೆ, ಭಯೋತ್ಪಾದನೆ ನಿಗ್ರಹ, ಅಕ್ರಮ ವಲಸಿಗರ ನಿಗ್ರಹ, ಮಾದಕದ್ರವ್ಯ ಕಳ್ಳಸಾಗಾಣೆ ನಿಗ್ರಹದಂಥ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತು ಪತ್ರುಶೆವ್ ಮತ್ತು ಡೊಭಾಲ್ ಚರ್ಚೆ ನಡೆಸಿದರು ಎಂದು ರಷ್ಯಾದ ಭದ್ರತಾ ಮಂಡಳಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.