ಅರ್ಜೆಂಟೀನಾಗೆ ಆಗಮಿಸಿದ ಮೋದಿ ಅವರನ್ನು ಸಚಿವರು, ಅಧಿಕಾರಿಗಳು ಬರಮಾಡಿಕೊಂಡರು.
@narendramodi
ಬ್ಯೂನಸ್ ಐರಿಸ್: ಐದು ದೇಶಗಳ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜೆಂಟೀನಾಗೆ ಭೇಟಿ ಕೊಟ್ಟಿದ್ದಾರೆ. ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೆಚ್ಚಿಸುವ ಸಲುವಾಗಿ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಐದು ರಾಷ್ಟ್ರಗಳ ಪ್ರವಾಸ ಪೈಕಿ ಇದು ಮೂರನೇ ರಾಷ್ಟ್ರವಾದ ಅರ್ಜೆಂಟೀನಾಗೆ ಮೋದಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಎಜೀಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸಾಂಪ್ರದಾಯಿಕ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು.
57 ವರ್ಷಗಳಲ್ಲಿ ಪ್ರಧಾನ ಮಂತ್ರಿ ಹಂತದಲ್ಲಿ ನಡೆಸುತ್ತಿರುವ ಮೊದಲ ದ್ವಿಪಕ್ಷೀಯ ಮಾತುಕತೆ ಇದಾಗಿದೆ. ಅರ್ಜೆಂಟೀನಾಗೆ ಮೋದಿಯ ಎರಡನೇ ಭೇಟಿ ಇದಾಗಿದ್ದು, 2018ರಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಇಲ್ಲಿಗೆ ಭೇಟಿ ನೀಡಿದ್ದರು.
ಪ್ರಧಾನಿ ಮೋದಿ ಅವರ ಭೇಟಿಯು ಭಾರತ ಮತ್ತು ಅರ್ಜೆಂಟೀನಾ ನಡುವಿನ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ರಕ್ಷಣೆ, ಕೃಷಿ, ಗಣಿಗಾರಿಕೆ, ತೈಲ, ನವೀಕರಿಸಬಹುದಾದ ಇಂಧನ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಅರ್ಜೆಂಟೀನಾ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಮೋದಿ ಮತ್ತು ಅಧ್ಯಕ್ಷ ಜೇವಿಯರ್ ಮಿಲೀ ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಕೃಷಿ, ಖನಿಜಗಳು, ಇಂಧನ, ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಹೂಡಿಕೆ ಕ್ಷೇತ್ರಗಳು ಸೇರಿದಂತೆ ನಮ್ಮ ಪರಸ್ಪರ ಸಹಕಾರವನ್ನು ಮುಂದುವರಿಸುವತ್ತ ನಾವು ಗಮನ ಹರಿಸುತ್ತೇವೆ ಎಂದು ಮೋದಿ ಪ್ರವಾಸಕ್ಕೂ ಮುನ್ನ ಹೇಳಿಕೆಯಲ್ಲಿ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.