ADVERTISEMENT

ಭಯೋತ್ಪಾದನಾ ನಿಗ್ರಹ: ಭಾರತದಿಂದ ₹4.18 ಕೋಟಿ ಕೊಡುಗೆ

ಪಿಟಿಐ
Published 8 ಮೇ 2024, 11:21 IST
Last Updated 8 ಮೇ 2024, 11:21 IST
ರುಚಿರಾ ಕಾಂಬೊಜ್
ರುಚಿರಾ ಕಾಂಬೊಜ್   

ವಿಶ್ವಸಂಸ್ಥೆ: ಭಾರತವು ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಟ್ರಸ್ಟ್‌ ನಿಧಿಗೆ (ಸಿಟಿಟಿಎಫ್‌) ₹4.18 ಕೋಟಿ (5 ಲಕ್ಷ ಡಾಲರ್‌) ಕೊಡುಗೆ ನೀಡಿದೆ.

ಭಯೋತ್ಪಾದನೆ ಪಿಡುಗಿನ ವಿರುದ್ಧ ನಡೆಯುತ್ತಿರುವ ಜಾಗತಿಕ ಹೋರಾಟದ ಪ್ರಯತ್ನಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಮುಖ್ಯವಾದ ಕೊಡುಗೆ ಇದಾಗಿದೆ. 

ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್ ಅವರು ಮಂಗಳವಾರ ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯ (ಯುಎನ್‌ಒಸಿಟಿ) ಉಪ ಪ್ರಧಾನ ಕಾರ್ಯದರ್ಶಿ ವ್ಲಾದಿಮಿರ್‌ ವೊರೊಂಕೊವ್‌ ಅವರಿಗೆ ನಿಧಿಯನ್ನು ಹಸ್ತಾಂತರಿಸಿದರು. ಈ ಮೂಲಕ ಭಾರತವು ಭಯೋತ್ಪಾದನಾ ನಿಗ್ರಹಕ್ಕೆ ತನ್ನ ಅಚಲವಾದ ಬದ್ಧತೆಯನ್ನು ವ್ಯಕ್ತಪಡಿಸಿದೆ.

ADVERTISEMENT

ಭಯೋತ್ಪಾದನೆಯ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಇದಕ್ಕಾಗಿ ಸದಸ್ಯ ರಾಷ್ಟ್ರಗಳ ಸಾಮರ್ಥ್ಯ ವೃದ್ಧಿಸಲು ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿ ಕೈಗೊಂಡಿರುವ ಕಾರ್ಯಗಳನ್ನು ಭಾರತ ಈ ಮೂಲಕ ಬೆಂಬಲಿಸಿದೆ ಎಂದು ಭಾರತದ ಕಾಯಂ ಮಿಷನ್‌ ಪ್ರಕಟಣೆಯಲ್ಲಿ ತಿಳಿಸಿದೆ. 

2022ರಲ್ಲಿ ದೆಹಲಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜರುಗಿದ್ದ ಭಯೋತ್ಪಾದನಾ ನಿಗ್ರಹ ಸಮಿತಿಯ ವಿಶೇಷ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು, ವಿಶ್ವಾಸ ನಿಧಿಗೆ ಕೊಡುಗೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಭಾರತ ಈಗ ಕೊಡುಗೆ ನೀಡಿದೆ. 2018ರಿಂದ ಭಾರತವು ಈ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.