ADVERTISEMENT

ಆಲ್ಫಾ, ಡೆಲ್ಟಾ ರೂಪಾಂತರಿಗಳ ವಿರುದ್ಧವೂ ಕೋವ್ಯಾಕ್ಸಿನ್‌ ಪರಿಣಾಮಕಾರಿ: ಎನ್‌ಐಎಚ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2021, 2:35 IST
Last Updated 30 ಜೂನ್ 2021, 2:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನ್ಯೂಯಾರ್ಕ್‌:ಭಾರತ್ ಬಯೋಟೆಕ್ ಕಂಪನಿಯು ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆಯು ಕೊರೊನಾ ವೈರಸ್‌ನ ರೂಪಾಂತರ ತಳಿಗಳಾದ ಆಲ್ಫಾ ಮತ್ತು ಡೆಲ್ಟಾ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ(ಎನ್‌ಐಎಚ್‌) ತಿಳಿಸಿದೆ.

ಕೋವ್ಯಾಕ್ಸಿನ್‌ ಪಡೆದವರ ರಕ್ತದ ಸೀರಮ್‌ನ ಆಧಾರವಾಗಿ ಎರಡು ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳ ಪ್ರಕಾರ, ಜನರ ದೇಹದಲ್ಲಿ ಕೋವಾಕ್ಸಿನ್‌ ಲಸಿಕೆಯು ಉತ್ಪತ್ತಿ ಮಾಡುವ ಪ್ರತಿಕಾಯಗಳು ಬಿ .1351 ಮತ್ತು ಬಿ .1.617.2 ರೂಪಾಂತರಿಗಳನ್ನು ತಟಸ್ಥಗೊಳಿಸುತ್ತದೆ ಎಂದು ಎನ್‌ಎಚ್‌ಐ ಹೇಳಿದೆ.

'ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಾಕ್ಸಿನ್‌ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ. ಭಾರತ ಹಾಗೂ ಇತರ ದೇಶಗಳೂ ಸೇರಿದಂತೆ ಈ ವರೆಗೂ ಸುಮಾರು 2.5 ಕೋಟಿಗೂ ಅಧಿಕ ಜನರಿಗೆ ಕೋವಾಕ್ಸಿನ್‌ ಲಸಿಕೆಯನ್ನು ನೀಡಲಾಗಿದೆ' ಎಂದು ಎನ್‌ಐಎಚ್‌ ತಿಳಿಸಿದೆ..

ADVERTISEMENT

ದೇಹದಲ್ಲಿ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಹೆಚ್ಚಿಸಲು ಮತ್ತು ಕೊರೊನಾ ರೂಪಾಂತರಿಗಳು ವಿರುದ್ಧ ಹೋರಾಡಲು ಲಸಿಕೆ ಪರಿಣಾಮಕಾರಿಯಾಗಿದೆ ಎಂದೂ ಎನ್‌ಐಎಚ್‌ ಅಭಿಪ್ರಾಯಪಟ್ಟಿದೆ.

ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ 'ಬಿಬಿವಿ 152‘ ಅಥವಾ ಕೋವ್ಯಾಕ್ಸಿನ್‌ ಅನ್ನು ಐಸಿಎಂಆರ್-ಎನ್ಐವಿ ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ಸಂಶೋಧಿಸಿವೆ.

ಬಿ.1.617.2–ಡೆಲ್ಟಾ: ಭಾರತದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ರೂಪಾಂತರಿ ತಳಿ. ಇದು ದೇಶದಲ್ಲಿ ಕೋವಿಡ್‌ನ ಎರಡನೇ ಅಲೆಗೆ ಕಾರಣವಾಗಿದೆ.

‘ಕೊರೊನಾ ವೈರಸ್‌ನ ಉಪ ತಳಿಯಾಗಿರುವ ಡೆಲ್ಟಾ ಆತಂಕಕಾರಿಯಾಗಿದೆ,' ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.