ADVERTISEMENT

ಸಿಖ್ ಪ್ರತ್ಯೇಕತಾವಾದಿ ನಾಯಕ ನಿಜ್ಜರ್‌ ಹತ್ಯೆ: ಕೆನಡಾ ಆರೋಪ ಅಲ್ಲಗಳೆದ ಭಾರತ

ಪಿಟಿಐ
Published 14 ಜನವರಿ 2026, 15:43 IST
Last Updated 14 ಜನವರಿ 2026, 15:43 IST
   

ಒಟ್ಟಾವ: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತದ ರಾಯಭಾರಿ ದಿನೇಶ್‌ ಕೆ. ಪಟ್ನಾಯಕ್‌ ಅಲ್ಲಗಳೆದಿದ್ದಾರೆ.

‘ಕೆನಡಾದಲ್ಲಿ ನಡೆದ ನಿಜ್ಜರ್‌ ಹತ್ಯೆ ಪ್ರಕರಣವು ಕೇವಲ ನಾಲ್ಕು ವ್ಯಕ್ತಿಗಳ ವಿರುದ್ಧ ಇದೆಯೇ ಹೊರತು ಭಾರತ ಸರ್ಕಾರದ ವಿರುದ್ಧವಲ್ಲ’ ಎಂದು ಪಟ್ನಾಯಕ್‌ ಸ್ಪಷ್ಟಪಡಿಸಿದ್ದಾರೆ. 

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್‌ನನ್ನು ಜೂನ್‌ 18ರಂದು ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. 

ADVERTISEMENT

ಕಳೆದ ನಾಲ್ಕು ದಶಕಗಳಿಂದ ಭಾರತವು ಕೆನಡಾದಲ್ಲಿನ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿದೆ. ಆದರೂ, ಐರ್ಲೆಂಡ್‌ ಕರಾವಳಿ ಪ್ರದೇಶದಲ್ಲಿ 1985ರಲ್ಲಿ ನಡೆದಿದ್ದ ಏರ್‌ ಇಂಡಿಯಾ ಬಾಂಬ್‌ ದಾಳಿ ಪ್ರಕರಣದ ತನಿಖೆಯಲ್ಲಿ ಇದುವರೆಗೆ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ. ಈ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ‘ ಎಂದು ಭಾರತದ ರಾಯಭಾರಿ ಸಿಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.  

 ಕೆನಡಾದ ಸರ್ರೆಯ ನಿವಾಸಿಯಾಗಿದ್ದ ಹರ್ದೀಪ್‌ ಸಿಂಗ್ ನಿಜ್ಜರ್‌ನ ಮೂಲ ಪಂಜಾಬ್‌ನ ಜಲಂಧರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.