ADVERTISEMENT

ಭಾರತ– ಇಥಿಯೋಪಿಯಾ: ಮೂರು ಒಪ್ಪಂದಗಳಿಗೆ ಸಹಿ

ದ್ವಿಪಕ್ಷೀಯ ಪಾಲುದಾರಿಕೆಯಲ್ಲಿ ಮಹತ್ವದ ಹೆಜ್ಜೆ– ಮೋದಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:27 IST
Last Updated 17 ಡಿಸೆಂಬರ್ 2025, 15:27 IST
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಗ್ರೇಟ್‌ ಆನರ್‌ ನಿಶಾನ್‌ ಆಫ್‌ ಇಥಿಯೋಪಿಯಾ’ ಪ್ರಶಸ್ತಿಯನ್ನು ಅಲ್ಲಿನ ಪ್ರಧಾನಿ ಅಬಿ ಅಹ್ಮದ್‌ ಅಲಿ ಪ್ರದಾನ ಮಾಡಿದರು –ಪಿಟಿಐ ಚಿತ್ರ 
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಗ್ರೇಟ್‌ ಆನರ್‌ ನಿಶಾನ್‌ ಆಫ್‌ ಇಥಿಯೋಪಿಯಾ’ ಪ್ರಶಸ್ತಿಯನ್ನು ಅಲ್ಲಿನ ಪ್ರಧಾನಿ ಅಬಿ ಅಹ್ಮದ್‌ ಅಲಿ ಪ್ರದಾನ ಮಾಡಿದರು –ಪಿಟಿಐ ಚಿತ್ರ     

ಅಡಿಸ್‌ ಅಬಾಬಾ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಇಥಿಯೋಪಿಯಾ ಭೇಟಿ ವೇಳೆ ಉಭಯ ದೇಶಗಳ ನಡುವೆ ಕಸ್ಟಮ್ಸ್‌ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ಸೇರಿದಂತೆ ಮಹತ್ವದ ಮೂರು ಒಪ್ಪಂದಗಳಿಗೆ ಬುಧವಾರ ಸಹಿ ಹಾಕಲಾಯಿತು.

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ ತರಬೇತಿ, ಇಥಿಯೋಪಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ದತ್ತಾಂಶ ಕೇಂದ್ರ ಸ್ಥಾಪನೆ ಕುರಿತ ಒಪ್ಪಂದಕ್ಕೆ ಈ ವೇಳೆ ಸಹಿ ಮಾಡಲಾಯಿತು.

ಇದಕ್ಕೂ ಮುನ್ನ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್‌ ಅಲಿ ಅವರ ಜತೆಗೆ ಮೋದಿ ಅವರು ವ್ಯಾಪಕ ಮಾತುಕತೆ ನಡೆಸಿದರು.

ADVERTISEMENT

‘ಈ ಒಪ್ಪಂದಗಳು ಜನ ಕೇಂದ್ರಿತ ಅಭಿವೃದ್ದಿ ಮೇಲೆ ಕೇಂದ್ರೀಕರಿಸಿದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ’ ಎಂದು ನರೇಂದ್ರ ಮೋದಿ ಬಣ್ಣಿಸಿದರು.

ಉಭಯ ದೇಶಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆ ನವೀಕರಣ, ಜಿ–20 ಅಡಿಯಲ್ಲಿ ಸಾಲ ಪುನರ್‌ರಚನೆ, ಶಿಕ್ಷಣ, ಆರೋಗ್ಯ, ಸಂಸ್ಕತಿ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಂಬಂಧ ವೃದ್ಧಿಸಲು ಉಭಯ ನಾಯಕರು ಸಮ್ಮತಿಸಿದರು.

‘ಎರಡೂ ದೇಶಗಳ ನಡುವೆ ದೀರ್ಘಕಾಲೀನ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಯಲ್ಲಿ ಇವು ಪ್ರಮುಖ ನಿರ್ಧಾರಗಳಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಇಥಿಯೋಪಿಯಾ ಬಲವಾದ ಬೆಂಬಲ ವ್ಯಕ್ತಪಡಿಸಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ಸಂಬಂಧ) ಸುಧಾಕರ್‌ ದಲೇಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

ಮೋದಿ ಅವರು ಬುಧವಾರ ಇಥಿಯೋಪಿಯಾದಿಂದ ಒಮನ್‌ಗೆ ತೆರಳಿದರು.

ಇಥಿಯೋಪಿಯಾದ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಸಂಸದರು ಸ್ವಾಗತಿಸಿದರು –ಪಿಟಿಐ ಚಿತ್ರ

ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಗ್ರೇಟ್‌ ಆನರ್‌ ನಿಶಾನ್‌ ಆಫ್‌ ಇಥಿಯೋಪಿಯಾ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್‌ ಅಲಿ ಪ್ರದಾನ ಮಾಡಿದರು.   ‘ಈ ಪ್ರಶಸ್ತಿಯನ್ನು ಭಾರತದ 140 ಕೋಟಿ ನಾಗರಿಕರಿಗೆ ಅರ್ಪಿಸುತ್ತೇನೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಮೋದಿ ಅವರಿಗೆ ದೊರೆತ 28ನೇ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ. ಅಲ್ಲದೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಮೊದಲ ಜಾಗತಿಕ ನಾಯಕ (ದೇಶವೊಂದರ ಮುಖ್ಯಸ್ಥ) ಮೋದಿ ಆಗಿದ್ದಾರೆ.

ವಂದೇ ಮಾತರಂ ಗೀತೆ ಗಾಯನ

ಪ್ರಧಾನಿ ಮೋದಿ ಅವರಿಗಾಗಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಮೂವರು ಗಾಯಕರು ವಂದೇ ಮಾತರಂ ಗೀತೆ ಗಾಯನ ಪ್ರಸ್ತುತಪಡಿಸಿದರು. ಈ ಕುರಿತ ವಿಡಿಯೊವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಮೋದಿ ‘ಇದು ತುಂಬಾ ಹೃದಯಸ್ಪರ್ಶಿ ಕ್ಷಣವಾಗಿತ್ತು’ ಎಂದು ಬಣ್ಣಿಸಿದ್ದಾರೆ.

‘ನೈಸರ್ಗಿಕ ಪಾಲುದಾರರು’

ಭಾರತ ಮತ್ತು ಇಥಿಯೋಪಿಯಾ ದೇಶಗಳು ಪ್ರಾದೇಶಿಕ ಶಾಂತಿ ಭದ್ರತೆ ಮತ್ತು ಸಂಪರ್ಕದಲ್ಲಿ ನೈಸರ್ಗಿಕ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಥಿಯೋಪಿಯಾದ ಸಂಸತ್ತಿನಲ್ಲಿ ಬುಧವಾರ ಜಂಟಿ ಅಧಿವೇಶವನ್ನು ಉದ್ದೇಶಿ ಭಾಷಣ ಮಾಡಿದ ಅವರು ‘ಎರಡೂ ದೇಶಗಳ ಪೂರ್ವಿಕರು ಕೇವಲ ಪದಾರ್ಥಗಳನ್ನಷ್ಟೇ ಅಲ್ಲದೆ ವಿಚಾರ ಮತ್ತು ಜೀವನ ವಿಧಾನವನ್ನು ವಿನಿಮಯ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು. ‘ಪ್ರಜಾಪ್ರಭುತ್ವವು ಒಂದು ಜೀವನ ವಿಧಾನ ಮತ್ತು ಪ್ರಯಾಣ ಎಂಬುದನ್ನು ಎರಡೂ ದೇಶಗಳು ಅರ್ಥಮಾಡಿಕೊಂಡಿವೆ’ ಎಂದು ಅವರು ವಿವರಿಸಿದರು. ಮೋದಿ ಅವರು ಭಾಷಣ ಮಾಡಿದ ವಿಶ್ವದ 18ನೇ ಸಂಸತ್ತು ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.