ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ನಿಂದ ತನ್ನ ಎಲ್ಲಾ ನಾಗರಿಕರನ್ನು ಸ್ಥಳಾಂತರಿಸುತ್ತಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಯಭಾರ ಕಚೇರಿ, ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಟೆಲಿಗ್ರಾಮ್ ಚಾನೆಲ್ ಲಿಂಕ್ ಅನ್ನು ನೀಡಿದೆ.
ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುತ್ತಿದೆ. ಟೆಲಿಗ್ರಾಮ್ ಚಾನೆಲ್ ಅಥವಾ ತುರ್ತು ಸಹಾಯವಾಣಿ ಸಂಖ್ಯೆಗಳ ಮೂಲಕ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು. ಸಹಾಯವಾಣಿ +989010144557, +989128109115 +989128109109ಕ್ಕೆ ಸಂಪರ್ಕಿಸುವಂತೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಭಾರತೀಯರು ಮಾತ್ರವಲ್ಲದೇ ನೇಪಾಳ ಮತ್ತು ಶ್ರೀಲಂಕಾದ ನಾಗರಿಕರನ್ನು ಸ್ಥಳಾಂತರಿಸಲಾಗುವುದು ಎಂದು ರಾಯಭಾರ ಕಚೇರಿ ಮತ್ತೊಂದು ಪೋಸ್ಟ್‌ನಲ್ಲಿ ಎಂದು ತಿಳಿಸಿದೆ.
ನೇಪಾಳ ಮತ್ತು ಶ್ರೀಲಂಕಾ ಸರ್ಕಾರಗಳ ಕೋರಿಕೆಯ ಮೇರೆಗೆ, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನೇಪಾಳ ಮತ್ತು ಶ್ರೀಲಂಕಾದ ನಾಗರಿಕರನ್ನು ಸಹ ಸ್ಥಳಾಂತರಿಸಲಿದೆ ಎಂದು ಅದು ಹೇಳಿದೆ.
ನೇಪಾಳ ಮತ್ತು ಶ್ರೀಲಂಕಾದ ನಾಗರಿಕರು ತುರ್ತಾಗಿ ರಾಯಭಾರ ಕಚೇರಿಯನ್ನು ಟೆಲಿಗ್ರಾಮ್ ಚಾನೆಲ್‌ನಲ್ಲಿ ಅಥವಾ +989010144557; +989128109115; +989128109109 ಈ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು ಎಂದಿದೆ.
ಇರಾನ್‌ನಲ್ಲಿರುವ ಶ್ರೀಲಂಕಾದ ನಾಗರಿಕರು ದೇಶವನ್ನು ತೊರೆಯಲು ಬಯಸಿದರೆ ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ.
ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ತೀವ್ರಗೊಂಡ ಹಿನ್ನೆಲೆ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಗೊಳಿಸಲು ‘ಆಪರೇಷನ್ ಸಿಂಧು’ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಭಾರತ ಬುಧವಾರ ಘೋಷಿಸಿತ್ತು.
ಆಪರೇಷನ್ ಸಿಂಧು ಅಡಿಯಲ್ಲಿ ಶನಿವಾರ 500ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಇರಾನ್‌ನಿಂದ ತವರಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.