ADVERTISEMENT

ಅಫ್ಗನ್‌ ಅಭಿವೃದ್ಧಿಗೆ ಭಾರತ ಶ್ರಮಿಸಿದೆ: ಮೀನಾಕ್ಷಿ ಲೇಖಿ

ವಿದೇಶಾಂಗ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ

ಪಿಟಿಐ
Published 9 ಸೆಪ್ಟೆಂಬರ್ 2021, 19:31 IST
Last Updated 9 ಸೆಪ್ಟೆಂಬರ್ 2021, 19:31 IST
ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ   

ನ್ಯೂಯಾರ್ಕ್: ಯುದ್ಧ, ಆಂತರಿಕ ಕಲಹದಿಂದ ತತ್ತರಿಸಿದ್ದ ಅಫ್ಗಾನಿಸ್ತಾನದಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ಶ್ರೇಯ ಭಾರತಕ್ಕೆ ಸಲ್ಲುತ್ತದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

ಇಲ್ಲಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ. ಅಫ್ಗಾನಿಸ್ತಾನದ ಜನರ ಶ್ರೇಯೋಭಿವೃದ್ಧಿಗಾಗಿ ಅಲ್ಲಿನ 34 ಪ್ರಾಂತ್ಯಗಳಲ್ಲೂ ಭಾರತವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಅವನ್ನು ಭಾರತವೇ ಅನುಷ್ಠಾನ ಮಾಡಿದೆ. ಮಾನವೀಯ ನೆಲೆಯಲ್ಲಿ ಭಾರತ ಈ ಕೆಲಸ ಮಾಡಿದೆ. ಇದಕ್ಕಾಗಿ 300 ಕೋಟಿ ಅಮೆರಿಕನ್ ಡಾಲರ್ (ಅಂದಾಜು₹ 22,000ಕೋಟಿ) ವೆಚ್ಚ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಭಾರತದ್ದಾಗಿದ್ದಾಗ ಕಳೆದ ತಿಂಗಳು ಸದಸ್ಯ ರಾಷ್ಟ್ರಗಳು ಅವಿರೋಧವಾಗಿ ನಿರ್ಣಯ ಅಂಗೀಕರಿಸಿವೆ. ತಾಲಿಬಾನ್ ಹಿಡಿತದಲ್ಲಿರುವ ಅಫ್ಗಾನಿಸ್ತಾನದ ನೆಲವನ್ನು ಯಾವುದೇ ದೇಶದ ವಿರುದ್ಧ ಭಯೋತ್ಪಾದನೆ ನಡೆಸಲು, ಉಗ್ರರಿಗೆ ತರಬೇತಿ ನೀಡಲು ಮತ್ತು ಉಗ್ರರಿಗೆ ಹಣಕಾಸು ನೆರವು ನೀಡಲು ಬಳಸಿಕೊಳ್ಳಬಾರದು ಎಂದು ನಿರ್ಣಯ ಅಂಗೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಭದ್ರತಾ ಮಂಡಳಿಯ 1267ನೇ ನಿರ್ಣಯವು ತಾಲಿಬಾನ್‌ನ ಹಲವು ಉಗ್ರರನ್ನು ಪಟ್ಟಿ ಮಾಡಿದೆ. ಆ ಪಟ್ಟಿಯಲ್ಲಿರುವ ಉಗ್ರರ ಬಗ್ಗೆ ಭಾರತವು ತನ್ನ ಕಳವಳವನ್ನು ಒತ್ತಿ ಹೇಳಿದೆ. ಅವರಿಗೆ ಅಫ್ಗಾನಿಸ್ತಾನದಲ್ಲಿ ಯಾವುದೇ ನೆಲೆ ಸಿಗದೇ ಇರುವುದು ಭಾರತದ ದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.ಆದರೆ ಈ ಪಟ್ಟಿಯಲ್ಲಿರುವ 14 ಜನರಿಗೆ ತಾಲಿಬಾನ್ ತನ್ನ ಹಂಗಾಮಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದೆ.

ಅಫ್ಗಾನಿಸ್ತಾನದಲ್ಲಿ ಮಾನವ ಹಕ್ಕುಗ
ಳನ್ನು ಎತ್ತಿ ಹಿಡಿಯಬೇಕು ಎಂಬುದೂ ನಿರ್ಣಯದ ಪ್ರಮುಖ ಅಂಶವಾಗಿತ್ತು. ಅಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಯಾಗಬೇಕು. ಮಕ್ಕಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ರಕ್ಷಿಸಬೇಕು ಎಂದು ಭಾರತವು ನಿರ್ಣಯ ಮಂಡನೆ ವೇಳೆ ಒತ್ತಿ ಹೇಳಿತ್ತು ಎಂದು ಅವರು ವಿವರಿಸಿದ್ದಾರೆ.

ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಲ್ಲದ ಭಾರತವು, ಆಗಸ್ಟ್ ತಿಂಗಳ ಮಟ್ಟಿಗೆ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು. ಸರದಿಯ ಮೇಲೆ ಎಲ್ಲಾ ಸದಸ್ಯ ರಾಷ್ಟ್ರಗಳೂ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.