ADVERTISEMENT

ಶ್ರೀಲಂಕಾ ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದ ನೆರವು

ಐಎಎನ್ಎಸ್
Published 10 ಸೆಪ್ಟೆಂಬರ್ 2022, 14:48 IST
Last Updated 10 ಸೆಪ್ಟೆಂಬರ್ 2022, 14:48 IST
   

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ನೆರೆಯ ಶ್ರೀಲಂಕಾಗೆ ಪಠ್ಯಪುಸ್ತಕಗಳನ್ನು ಮುದ್ರಿಸಲು ಭಾರತ ನೆರವು ನೀಡಲು ಮುಂದಾಗಿದೆ.

ಭಾರತೀಯ ಸಾಲ ಯೋಜನೆ ಅಡಿಯಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಅಗತ್ಯವಿರುವ ಕಾಗದ, ಶಾಯಿ ಸೇರಿದಂತೆ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುಸಿಲ್ ಪ್ರೇಮೇಜನಾಥ ತಿಳಿಸಿದ್ದಾರೆ.

ಮುಂದಿನ ಮಾರ್ಚ್‌ನಲ್ಲಿ ಆರಂಭವಾಗಲಿರುವ 2023ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪಠ್ಯ ಪುಸ್ತಕ ಮುದ್ರಣ ಪ್ರಕ್ರಿಯೆ ಜನವರಿಗೆ ಅಂತ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಡಾಲರ್ ಕೊರತೆ ಇರುವುದರಿಂದ ಪಠ್ಯಪುಸ್ತಕಗಳ ಮುದ್ರಣಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾದ ಕಚ್ಚಾವಸ್ತುಗಳ ಖರೀದಿಗೂ ಶ್ರೀಲಂಕಾ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಕಳೆದ ವರ್ಷದ ಮಾರ್ಚ್‌ನಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸಲು ಕಾಗದದ ಕೊರತೆ ಉಂಟಾಗಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.

ಉಚಿತ ಶಿಕ್ಷಣ ಯೋಜನೆಯಡಿ ಶ್ರೀಲಂಕಾವು ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಒದಗಿಸುತ್ತದೆ. 2023ರ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಸುಮಾರು 44 ಮಿಲಿಯನ್ ಡಾಲರ್ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಆರ್ಥಿಕ ಸಂಕಷ್ಟ ಎದುರಿಸಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಲಂಕಾಗೆ 4 ವರ್ಷಗಳಲ್ಲಿ 2.9 ಬಿಲಿಯನ್ ಡಾಲರ್ ನೆರವು ನೀಡುತ್ತಿದೆ. 2022ರಲ್ಲಿ ಭಾರತ ದೇಶವೊಂದೇ ಅತಿ ಹಚ್ಚು 4 ಬಿಲಿಯನ್ ಡಾಲರ್ ನೆರವು ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.