ಡೊನಾಲ್ಡ್ ಟ್ರಂಪ್
ರಾಯಿಟರ್ಸ್
ವಾಷಿಂಗ್ಟನ್: ಭಾರತ ಸೇರಿದಂತೆ ವಿವಿಧ ದೇಶಗಳಿಂದ ಅಮೆರಿಕಕ್ಕೆ ಆಮದಾಗುವ ಉತ್ಪನ್ನಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪ್ರತಿ ಸುಂಕ ಘೋಷಿಸಿದ್ದು, ಏಪ್ರಿಲ್ 9ರಿಂದ ಇದು ಅನ್ವಯವಾಗಲಿದೆ ಎಂದು ಶ್ವೇತಭವನ ತಿಳಿಸಿದೆ.
ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 26ರಷ್ಟು ಪ್ರತಿ ಸುಂಕ ವಿಧಿಸಲಾಗಿದೆ. ಚೀನಾ, ಪಾಕಿಸ್ತಾನ, ಐರೋಪ್ಯ ಒಕ್ಕೂಟ ಸೇರಿದಂತೆ ಸುಮಾರು 182 ದೇಶಗಳ ಮೇಲೆ ಸುಂಕದ ಬರೆ ಎಳೆಯಲಾಗಿದೆ.
ಭಾರತದ ಮೇಲೆ ಪ್ರತಿ ಸುಂಕ ವಿಧಿಸಿರುವುದನ್ನು ಬಹಳ ಕಠಿಣ ಎಂದು ವಿವರಿಸಿರುವ ಟ್ರಂಪ್, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿರುವುದನ್ನು ನೆನಪಿಸಿಕೊಂಡಿದ್ದಾರೆ.
‘ಮೋದಿ ನನ್ನ ಉತ್ತಮ ಸ್ನೇಹಿತ. ಇತ್ತೀಚೆಗೆ ಅಮೆರಿಕಕ್ಕೆ ಬಂದು ಹೋಗಿದ್ದರು. ಆದರೆ, ಸುಂಕದ ವಿಚಾರವಾಗಿ ಅವರು(ಭಾರತ) ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಅವರು ನಮಗೆ ಶೇ 52ರಷ್ಟು ಸುಂಕ ಹಾಕುತ್ತಿದ್ದಾರೆ. ಅದಕ್ಕೆ ಹೋಲಿಸಿದರೆ ನಮ್ಮದು ಏನು ಅಲ್ಲ’ ಎಂದು ತಿಳಿಸಿದ್ದಾರೆ.
‘ಇತರ ದೇಶಗಳು ಅಮೆರಿಕದಿಂದ ಆಮದಾಗುವ ಉತ್ಪನ್ನಗಳ ಮೇಲೆ ವಿಧಿಸುವ ಅರ್ಧದಷ್ಟು ಸುಂಕವನ್ನು ನಾವು ವಿಧಿಸುತ್ತಿದ್ದೇವೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತದ ನೆರೆಯ ದೇಶಗಳಾದ ಚೀನಾದ ಮೇಲೆ ಶೇ 34, ಪಾಕಿಸ್ತಾನದ ಮೇಲೆ ಶೇ 29, ಬಾಂಗ್ಲಾದೇಶದ ಮೇಲೆ ಶೇ 37, ಥೈಲ್ಯಾಂಡ್ ಮೇಲೆ ಶೇ 36, ಶ್ರೀಲಂಕಾಕ್ಕೆ ಶೇ 44, ಮ್ಯಾನ್ಮಾರ್‌ಗೆ ಶೇ 44, ಭೂತಾನ್ ಮತ್ತು ಮಾಲ್ಡೀವ್ಸ್ ಮೇಲೆ ಶೇ 10 ಪ್ರತಿ ಸುಂಕ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.