ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರು ಬುಧವಾರ ಪ್ರಧಾನಿ ಮೋದಿ ಅವರಿಗೆ ‘ದಿ ಆಫೀಸರ್ ಆಫ್ ದ ಆರ್ಡರ್ ಸ್ಟಾರ್ ಆಫ್ ಘಾನಾ’ ಪ್ರಶಸ್ತಿ ನೀಡಿ ಗೌರವಿಸಿದರು
ಪಿಟಿಐ ಚಿತ್ರ
ಅಕ್ರಾ, ಘಾನಾ: ‘ಭಾರತ ಹಾಗೂ ಘಾನಾ ಪರಸ್ಪರ ಸಂಬಂಧವನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಿಕೊಂಡಿದ್ದು, ಆಫ್ರಿಕಾ ದೇಶದ ಅಭಿವೃದ್ಧಿ ವಿಷಯದಲ್ಲಿ ಭಾರತವೂ ಸಹ-ಪ್ರಯಾಣಿಕನಂತೆ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದರು.
ಇಲ್ಲಿನ ರಾಜಧಾನಿಯಲ್ಲಿ ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಜೊತೆ ಬುಧವಾರ ವಿವಿಧ ಕ್ಷೇತ್ರಗಳ ಕುರಿತು ಮಾತುಕತೆ ನಡೆಸಿದ ನಂತರ ಈ ಹೇಳಿಕೆ ನೀಡಿದರು.
‘ಮುಂದಿನ ಐದು ವರ್ಷಗಳಲ್ಲಿ ಎರಡೂ ರಾಷ್ಟ್ರಗಳ ನಡುವಿನ ವಹಿವಾಟನ್ನು ದ್ವಿಗುಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐದು ದೇಶಗಳ ಪ್ರವಾಸ ಕೈಗೊಂಡಿರುವ ಪ‍್ರಧಾನಿ ಮೋದಿ ಮೊದಲಿಗೆ ಘಾನಾಕ್ಕೆ ಬಂದಿಳಿದರು. ಇದಾದ ಕೆಲವು ಗಂಟೆಗಳಲ್ಲಿ ಉಭಯ ರಾಷ್ಟ್ರಗಳ ನಿಯೋಗವು ಮಾತುಕತೆ ನಡೆಸಿತು. ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಅವರೇ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡು, ಸ್ವಾಗತಿಸಿದರು. ಕಳೆದ ಮೂರು ದಶಕಗಳಲ್ಲಿ ಇಲ್ಲಿಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಇವರಾಗಿದ್ದಾರೆ.
ಉಭಯ ನಾಯಕರ ಜೊತೆಗೆ ಮಾತುಕತೆ ನಡೆದ ಬಳಿಕ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಸಂಬಂಧಿಸಿದ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
‘ಘಾನಾದ ಸುಮಾರು 900 ಯೋಜನೆಗಳಲ್ಲಿ ಭಾರತದ ಕಂಪನಿಗಳು ಸುಮಾರು 200 ಕೋಟಿ ಡಾಲರ್ (ಸುಮಾರು ₹17,083 ಕೋಟಿ) ಹೂಡಿಕೆ ಮಾಡಿದ್ದು, ಮುಂದಿನ ಐದು ವರ್ಷಗಳಲ್ಲಿ ಉಭಯ ರಾಷ್ಟ್ರಗಳ ವಹಿವಾಟನ್ನು ದ್ವಿಗುಣಗೊಳಿಸಲು ನಿರ್ಧಾರ ತೆಗೆದುಕೊಂಡಿವೆ’ ಎಂದು ಮೋದಿ ತಿಳಿಸಿದರು.
‘ಯುಪಿಐ ಡಿಜಿಟಲ್ ವಹಿವಾಟಿನ ಕುರಿತು ತನ್ನ ಅನುಭವಗಳನ್ನು ಘಾನಾದ ಜೊತೆಗೆ ಹಂಚಿಕೊಳ್ಳಲು ಭಾರತ ಸಿದ್ಧವಿದೆ. ಅತ್ಯಂತ ಅಪರೂಪದ ಖನಿಜಗಳ ಪರಿಶೋಧನೆಯಲ್ಲಿ ಭಾರತದ ಕಂಪನಿಗಳು ಕೈ ಜೋಡಿಸಲಿವೆ’ ಎಂದು ಹೇಳಿದರು.
ಸ್ಥಿರ–ಸಮೃದ್ಧ ಜಗತ್ತಿಗೆ ಭಾರತದ ಕೊಡುಗೆ: ಸ್ಥಿರ ಹಾಗೂ ಸಮೃದ್ಧ ಜಗತ್ತಿಗೆ ಭಾರತವು ಬಹುದೊಡ್ಡ ಕೊಡುಗೆ ನೀಡಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ‘ಬದಲಾದ ಕಾಲಮಾನಕ್ಕೆ ತಕ್ಕಂತೆ ವಿಶ್ವಾಸಾರ್ಹ ಹಾಗೂ ಪರಿಣಾಮಕಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಇಲ್ಲಿನ ಸಂಸತ್ ಉದ್ದೇಶಿಸಿ ಮಾತನಾಡಿದ ಅವರು, ‘ವಿಶ್ವದ ದಕ್ಷಿಣ ಭಾಗಕ್ಕೆ ಧ್ವನಿ ನೀಡದೆ ಅಭಿವೃದ್ಧಿ ಸಾಧ್ಯವಿಲ್ಲ. ಜಾಗತಿಕ ಅಸ್ಥಿರತೆಯ ಕಾಲಘಟ್ಟದಲ್ಲಿ ಭಾರತದ ಸದೃಢ ಪ್ರಜಾಪ್ರಭುತ್ವವು ಆಶಾಕಿರಣವಾಗಿದೆ. ಭಾರತದ ಕ್ಷಿಪ್ರ ಬೆಳವಣಿಗೆಯು ಜಾಗತಿಕ ಬೆಳವಣಿಗೆ ವೇಗವರ್ಧಕವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ವಿಶ್ವದ ಆಧಾರಸ್ತಂಭವಾಗಿದೆ’ ಎಂದು ಹೇಳಿದರು.
ಎರಡು ದಿನಗಳ ಘಾನಾ ಪ್ರವಾಸ ಮುಗಿಸಿದ ಮೋದಿ ಅವರು ಗುರುವಾರ ರಾತ್ರಿ ಟ್ರಿನಿಡಾಡ್, ಟೊಬಾಗೊ ಪ್ರವಾಸಕ್ಕೆ ತೆರಳಿದರು.
ಕಡಲ ಭದ್ರತೆ, ರಕ್ಷಣಾ ಸಲಕರಣೆಗಳ ಪೂರೈಕೆ, ಸೈಬರ್ ಭದ್ರತೆಯಲ್ಲಿ ಪರಸ್ಪರ ಸಹಕಾರ ಭಯೋತ್ಪಾದನೆ ಮಟ್ಟಹಾಕಲು ಸಹಕರಿಸಲು ಎರಡು ರಾಷ್ಟ್ರಗಳ ಒಪ್ಪಿಗೆ ಮೋದಿ–ಜಾನ್ ಡ್ರಾಮಾನಿ ಮಾತುಕತೆ ವೇಳೆ ನಿರ್ಧಾರ
ಮಾನವೀಯತೆಗೆ ಭಯೋತ್ಪಾದನೆಯು ಶತ್ರುವಾಗಿದ್ದು ಇದನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ಬಲಪಡಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆನರೇಂದ್ರ ಮೋದಿ ಪ್ರಧಾನಿ
ಮೋದಿಗೆ ಘಾನಾದ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’
ಅಕ್ರಾ : ‘ವಿಶಿಷ್ಟ ರಾಜನೀತಿ ಹಾಗೂ ಜಾಗತಿಕ ಪ್ರಭಾವಿ ನಾಯಕತ್ವ’ವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ದಿ ಆಫೀಸರ್ ಆಫ್ ದ ಆರ್ಡರ್ ಸ್ಟಾರ್ ಆಫ್ ಘಾನಾ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರು ಬುಧವಾರ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ‘ದೇಶದ 140 ಕೋಟಿ ನಾಗರಿಕರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದು ತಿಳಿಸಿದ ಮೋದಿ ‘ಎರಡೂ ದೇಶಗಳ ಯುವಕರ ಆಕಾಂಕ್ಷೆ ಹಾಗೂ ಭವಿಷ್ಯಕ್ಕಾಗಿ ಈ ಪ್ರಶಸ್ತಿ ಅರ್ಪಿಸುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.