ADVERTISEMENT

ಕೋವಿಡ್‌: ಭಾರತದ ತಪ್ಪು ಕಲ್ಪನೆಯಿಂದ ಈ ಪರಿಸ್ಥಿತಿ ಎದುರಾಗಿದೆ –ಡಾ.ಫೌಸಿ

ಪಿಟಿಐ
Published 12 ಮೇ 2021, 8:25 IST
Last Updated 12 ಮೇ 2021, 8:25 IST
ಡಾ. ಆಂಥೋನಿ ಫೌಸಿ
ಡಾ. ಆಂಥೋನಿ ಫೌಸಿ   

ವಾಷಿಂಗ್ಟನ್‌: ‘ಭಾರತವು ಕೋವಿಡ್ ಪಿಡುಗು ಅಂತ್ಯವಾಯಿತು ಎಂಬ ತಪ್ಪು ಕಲ್ಪನೆಯೊಂದಿಗೆ ಸಮಯಕ್ಕಿಂತ ಮೊದಲೇ ತನ್ನ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸಿತು. ಇದರಿಂದಾಗಿ ಭಾರತ ಈ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ಅವರು ಹೇಳಿದರು.

ಕೋವಿಡ್‌–19 ಪ್ರತಿಕ್ರಿಯೆಯ ಕುರಿತಾಗಿ ಮಂಗಳವಾರ ನಡೆದ ಸಭೆಯಲ್ಲಿ ಫೌಸಿ ಅವರುಈ ಬಗ್ಗೆ ಸೆನೆಟ್‌ನ ಆರೋಗ್ಯ, ಶಿಕ್ಷಣ, ಕಾರ್ಮಿಕ ಮತ್ತು ಪಿಂಚಣಿ ಸಮಿತಿಗೆ ಈ ವಿಷಯ ತಿಳಿಸಿದರು.

‘ಭಾರತದ ಪರಿಸ್ಥಿತಿಯು ಚಿಂತಾಜನಕವಾಗಿದೆ. ವಿಶ್ವದಲ್ಲಿ ಕೋವಿಡ್‌ ಸಂಪೂರ್ಣವಾಗಿ ಅಂತ್ಯವಾಗುವವರೆಗೆ ಅಮೆರಿಕದಲ್ಲೂ ಈ ಪಿಡುಗು ಅಂತ್ಯವಾಗಲ್ಲ’ ಎಂದು ಅವರು ಹೇಳಿದರು.

ADVERTISEMENT

‘ವಿಶ್ವ ಆರೋಗ್ಯ ಸಂಸ್ಥೆಗೆ ಮರು ಸೇರ್ಪಡೆಯಾಗುವ ಮೂಲಕ ಬೈಡನ್‌ ಆಡಳಿತವು ಜಾಗತಿಕ ಹೋರಾಟದಲ್ಲಿ ಮುಂದಾಳತ್ವವನ್ನು ವಹಿಸಿದೆ. ಅಲ್ಲದೆ ಅಮೆರಿಕವು ಜುಲೈ 4ರೊಳಗೆ ಇತರೆ ದೇಶಗಳಿಗೆ 6 ಕೋಟಿ ಅಸ್ಟ್ರಾಜೆನಿಕಾ ಲಸಿಕೆಯನ್ನು ಕಳುಹಿಸಲಿದೆ’ ಎಂದು ಅವರು ತಿಳಿಸಿದರು.

‘ಯಾವತ್ತೂ ಪರಿಸ್ಥಿತಿಯನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳಬಾರದು ಮತ್ತು ಭವಿಷ್ಯದ ಕೋವಿಡ್‌ ಅಲೆಗಳಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಪಾಠವನ್ನು ನಾವು ಭಾರತದ ಬಿಕ್ಕಟ್ಟಿನಿಂದ ಕಲಿಯಬಹುದು’ ಎಂದು ಸಂಸದರಿಗೆಫೌಸಿ ತಿಳಿಸಿದರು.

‘ಜಾಗತಿಕ ‍ಪಿಡುಗನ್ನು ನಾವು ಜಾಗತಿಕವಾಗಿ ಹೋರಾಡಬೇಕು. ರಾಷ್ಟ್ರಗಳು ಪರಸ್ಪರ ಸಹಾಯ ಮಾಡಬೇಕು. ಈ ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸಬೇಕು’ ಎಂದು ಅವರು ಅಭಿ‍ಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.