ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ
ರಾಯಿಟರ್ಸ್ ಚಿತ್ರ
ಬೀಜಿಂಗ್: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋಬಲ್ ಅವರೊಂದಿಗೆ ಮಾತನಾಡಿದ್ದು, ಪಾಕಿಸ್ತಾನದ ಜತೆಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಂಡು ಶಾಶ್ವತ ಕದನ ವಿರಾಮ ಸ್ಥಾಪಿಸುವಂತೆ ಕರೆ ನೀಡಿದ್ದಾರೆ.
ಮಾತುಕತೆಯ ವೇಳೆ ಯಿ ಅವರಿಗೆ ಪ್ರತಿಕ್ರಿಯಿಸಿದ ದೋಬಲ್, ‘ಯುದ್ಧ ಭಾರತದ ಆಯ್ಕೆಯಲ್ಲ ಆದರೆ ಪಹಲ್ಗಾಮ್ ದಾಳಿಯ ನಂತರ ಭಾರತಕ್ಕೆ ಭಯೋತ್ಪಾದನಾ ನಿಗ್ರಹ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಹೇಳಿರುವುದಾಗಿ ಚೀನಾದ ಸುದ್ದಿ ಸಂಸ್ಥೆ ಕ್ಸಿನ್ಸುವಾ ವರದಿ ತಿಳಿಸಿದೆ.
‘ಭಾರತ ಮತ್ತು ಪಾಕಿಸ್ತಾನ ಸಮಾಲೋಚನೆಯ ಮೂಲಕ ಸಮಗ್ರ ಮತ್ತು ಶಾಶ್ವತವಾದ ಕದನ ವಿರಾಮವನ್ನು ಸಾಧಿಸುವುದನ್ನು ಚೀನಾ ಬೆಂಬಲಿಸುತ್ತದೆ ಮತ್ತು ಅದನ್ನೇ ನಿರೀಕ್ಷಿಸುತ್ತದೆ. ಇದು ಎರಡೂ ದೇಶಗಳ ಮೂಲಭೂತ ಹಿತಾಸಕ್ತಿಯಾಗಿದೆ’ ಎಂದು ಯಿ ಹೇಳಿದ್ದಾರೆ.
ಪಹಲ್ಗಾಮ್ ದಾಳಿಯನ್ನು ಯಿ ಖಂಡಿಸಿದ್ದು, ಪಾಕಿಸ್ತಾನ ಉಪ ಪ್ರಧಾನಿ ಮೊಹಮ್ಮದ್ ಇಶಾಕ್ ದಾರ ಜತೆಗೆ ಮಾತನಾಡಿದ್ದಾರೆ ಎಂದು ವರದಿ ತಿಳಿಸಿದೆ.
ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕೈಗೊಂಡಿತ್ತು. ಅಲ್ಲಿಂದ ಭಾರತ ಮತ್ತು ಪಾಕ್ ನಡುವೆ ಸತತ ನಾಲ್ಕು ದಿನಗಳ ಕಾಲ ಡ್ರೋನ್, ಕ್ಷಿಪಣಿ ದಾಳಿಗಳು ಮುಂದುವರಿದಿದ್ದವು. ಶನಿವಾರ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಉಭಯ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ಮೇಲೆ ಡ್ರೋನ್ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿತ್ತು. ಪಾಕ್ ದಾಳಿಗೆ ಭಾರತ ಸೇನೆ ಪ್ರತ್ಯುತ್ತರ ನೀಡಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.