
ಇಸ್ಲಾಮಾಬಾದ್: ‘ಭಾರತ– ಪಾಕಿಸ್ತಾನ ಸಂಘರ್ಷವನ್ನು ಶಮನ ಮಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಮ್ಮೆ ಹೇಳಿದ್ದಾರೆ.
ನಾಲ್ಕು ದಿನಗಳ ಕಾಲ ನಿರಂತರವಾಗಿ ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಬಳಿಕ ಭಾರತ– ಪಾಕಿಸ್ತಾನ ಸಂಘರ್ಷ ಕೊನೆಗಳಿಸಿ ಮೇ 10ರಂದು ಒಪ್ಪಂದ ಮಾಡಿಕೊಂಡವು. ಇದರಲ್ಲಿ ಮೂರನೆಯ ಯಾವ ವ್ಯಕ್ತಿಯೂ ಭಾಗಿಯಾಗಿಲ್ಲ ಎಂದು ಭಾರತ ಪದೇ ಪದೇ ಹೇಳುತ್ತಿದೆ. ಆದರೂ ಈ ಸಂಘರ್ಷವನ್ನು ಕೊನೆಗೊಳಿಸಿದ್ದು ತಾವೇ ಎಂದು ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿದ್ದಾರೆ.
ಬಾಕುದಲ್ಲಿ ಅಜರ್‌ಬೈಜಾನ್‌ನ ವಿಜಯ ದಿನದ ಪರೇಡ್‌ನಲ್ಲಿ ಶನಿವಾರ ಶರೀಫ್ ಮಾತನಾಡಿದರು.
‘ಟ್ರಂಪ್ ಅವರ ದಿಟ್ಟ ಮತ್ತು ನಿರ್ಣಾಯಕ ನಾಯಕತ್ವದಿಂದ ಭಾರತ–ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಯಿತು. ಇದು ದೊಡ್ಡ ಯುದ್ಧವೊಂದನ್ನು ತಪ್ಪಿಸಿ, ಲಕ್ಷಾಂತರ ಜನರ ಜೀವ ಉಳಿಸಿತು. ದಕ್ಷಿಣ ಏಷ್ಯಾದಲ್ಲಿ ಶಾಂತಿಯನ್ನು ಪುನರ್‌ಸ್ಥಾಪಿಸಿತು’ ಎಂದು ಹೇಳಿದರು.
ಏ.22ರಂದು ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರರು 22 ಮಂದಿ ಭಾರತೀಯರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಸಿಂಧೂರ’ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.