ವಿಶ್ವಸಂಸ್ಥೆ ಪ್ರಧಾನ ಕಚೇರಿ
iStock Photo
ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಹಸ್ಯ ಸಮಾಲೋಚನೆ ನಡೆಸಿದೆ.
ಈ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆಗಳನ್ನು ಒಡ್ಡಿದ್ದರು ಎಂದು ಸುದ್ದಿ ಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ದಾಳಿಯ ವೇಳೆ ಪ್ರವಾಸಿಗರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿ ಕೊಂದಿರುವ ಬಗ್ಗೆಯೂ ಭದ್ರತಾ ಮಂಡಳಿಯ ಕೆಲವು ಸದಸ್ಯರು ಪ್ರಸ್ತಾಪಿಸಿದರು ಎಂದು ತಿಳಿದು ಬಂದಿದೆ.
ಪರಿಸ್ಥಿತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ದೇಶದ ಪರ ಗಮನ ಸೆಳೆಯಲು ಪಾಕಿಸ್ತಾನ ಮಾಡಿದ ಪ್ರಯತ್ನಗಳು ವಿಫಲವಾದವು. ಭಾರತದೊಂದಿಗೆ ದ್ವಿಪಕ್ಷೀಯವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಭದ್ರತಾ ಮಂಡಳಿಯ 15 ಕಾಯಂ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿರುವ ಪಾಕಿಸ್ತಾನ, ಪರಿಸ್ಥಿತಿಯ ಕುರಿತು ರಹಸ್ಯ ಸಮಾಲೋಚನೆ ನಡೆಸುವಂತೆ ಕೋರಿತ್ತು.
ಪರಮಾಣು ಶಸ್ತ್ರಸಜ್ಜಿತ ಉಭಯ ದೇಶಗಳ ನಡುವಿನ ಉದ್ವಿಗ್ನತೆ ವರ್ಷಗಳಲ್ಲಿಯೇ ಎತ್ತರದ ಮಟ್ಟಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.