ಪಾಕಿಸ್ತಾನ ಸೇನೆಯು ಅಬ್ದಲಿ ಎಂಬ ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಿತು
ಎಕ್ಷ್ ಚಿತ್ರ
ನವದೆಹಲಿ: ನಿರ್ದಿಷ್ಟ ಗುರಿ ಕೇಂದ್ರೀಕರಿಸಿ ದಾಳಿ ನಡೆಸುವ ಸಾಮರ್ಥ್ಯವುಳ್ಳ ‘ಅಬ್ದಾಲಿ’ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನವು ಶನಿವಾರ ಯಶಸ್ವಿಯಾಗಿ ನಡೆಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ. 450 ಕಿ.ಮೀ ದೂರ ಸಾಗಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.
‘ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕ್ಷಿಪಣಿಯ ಸುಧಾರಿತ ಸಂಚಾರ ವ್ಯವಸ್ಥೆ ಮತ್ತು ತಾಂತ್ರಿಕ ಗುಣ ಲಕ್ಷಣಗಳನ್ನು ಪರೀಕ್ಷೆಗೆ ಒಳಡಿಸುವುದು ಇದರ ಉದ್ದೇಶವಾಗಿತ್ತು’ ಎಂದು ಸೇನೆಯ ಪ್ರಕಟಣೆ ತಿಳಿಸಿದೆ. ‘ಆಪರೇಷನ್ ಇಂಡಸ್’ ಸಮರಾಭ್ಯಾಸದ ಭಾಗವಾಗಿ ಈ ಪರೀಕ್ಷೆ ನಡೆದಿದೆ ಎಂದು ಹೇಳಿದೆ. ಆದರೆ ಈ ಸಮರಾಭ್ಯಾಸದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ಸೇನೆಯ ಯುದ್ಧ ತಂತ್ರ ಪಡೆ ಮತ್ತು ಯುದ್ಧ ತಂತ್ರ ವಿಭಾಗದ ಹಿರಿಯ ಅಧಿಕಾರಿಗಳು ಅಲ್ಲದೆ, ಪಾಕಿಸ್ತಾನದ ವಿವಿಧ ಯುದ್ಧ ತಂತ್ರ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಪರೀಕ್ಷಾರ್ಥ ಪ್ರಯೋಗಕ್ಕೆ ಸಾಕ್ಷಿಯಾದರು.
‘ಎಚ್ಚರಿಕೆಯ ಸಂದೇಶ’
‘ಅಬ್ದಾಲಿ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ‘ಭಾರತಕ್ಕೆ ನೀಡಿದ ಎಚ್ಚರಿಕೆಯ ಸಂದೇಶ’ ಎಂದು ಪಾಕಿಸ್ತಾನದ ಮಿಲಿಟರಿ ವಿಶ್ಲೇಷಕ ಹಸನ್ ಅಸ್ಕರಿ ರಿಜ್ವಿ ಹೇಳಿದ್ದಾರೆ.
‘ಪ್ರಚೋದನೆಯ ಕೃತ್ಯ’
ನವದೆಹಲಿ: ಪಾಕಿಸ್ತಾನವು ಕ್ಷಿಪಣಿ ಪರೀಕ್ಷೆ ನಡೆಸಿರುವುದನ್ನು ಭಾರತವು ‘ಪ್ರಚೋದನೆಯ ಕೃತ್ಯ’ ಎಂದು ಪರಿಗಣಿಸಿರುವುದಾಗಿ ಮೂಲಗಳು ತಿಳಿಸಿವೆ.
‘ಪಾಕಿಸ್ತಾನವು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರುವುದು ತಿಳಿದು ಬಂದಿದೆ. ಇದು ‘ಇನ್ನಷ್ಟು ಪ್ರಚೋದಿಸುವ’ ಮತ್ತು ‘ಉದ್ವಿಗ್ನತೆಯನ್ನು ಹೆಚ್ಚಿಸುವ ಹತಾಶ ಪ್ರಯತ್ನ’ವಲ್ಲದೆ ಬೇರೇನೂ ಅಲ್ಲ’ ಎಂದು ಭಾರತದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ, ಪಾಕ್‌ನ ಕ್ಷಿಪಣಿ ಪರೀಕ್ಷೆಯ ಬಗ್ಗೆ ಭಾರತ ಸರ್ಕಾರ ಅಥವಾ ಸೇನೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪರೀಕ್ಷೆಗೂ ಮುನ್ನ ಪಾಕಿಸ್ತಾನವು ಭಾರತಕ್ಕೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.