ADVERTISEMENT

ಕೋವಿಡ್ ನೆಪದಲ್ಲಿ ಮಾಧ್ಯಮ ಸ್ವಾತಂತ್ರ್ಯ ದಮನ: ಕಳವಳ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 2:27 IST
Last Updated 25 ಏಪ್ರಿಲ್ 2020, 2:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಯೆನ್ನಾ: ಕೋವಿಡ್‌–19 ಪಿಡುಗಿನಿಂದ ಉಂಟಾಗಿರುವ ಬಿಕ್ಕಟ್ಟಿನ ಚಿತ್ರಣವನ್ನು ತನಗೆ ಬೇಕಾದಂತೆ ಬಿಂಬಿಸುವುದಕ್ಕಾಗಿ ಪತ್ರಕರ್ತರನ್ನು ಗುರಿಯಾಗಿಸಿ ಸರ್ಕಾರ ನಡೆಸುತ್ತಿರುವ ಕಾರ್ಯಾಚರಣೆಗಳು ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತಷ್ಟು ಕುಸಿಯುವ ಆತಂಕಕ್ಕೆ ಕಾರಣವಾಗಿದೆ ಎಂದು ಇಂಟರ್‌ನ್ಯಾಷನಲ್‌ ಪ್ರೆಸ್‌ ಇನ್ಸ್‌ಟಿಟ್ಯೂಟ್‌ (ಐಪಿಐ) ಎಚ್ಚರಿಕೆ ನೀಡಿದೆ.

ಕೋವಿಡ್‌ ಪಿಡುಗಿನ ಬಗ್ಗೆ ಮಾಧ್ಯಮವು ಸ್ವತಂತ್ರವಾಗಿ ವರದಿ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಹಲವು ತಂತ್ರಗಳನ್ನು ಅನುಸರಿಸಿದೆ. ಕೊರೊನಾ ಬಿಕ್ಕಟ್ಟಿಗೆ ಸಂಬಂಧಿಸಿ, ಸರ್ಕಾರ ನೀಡಿದ ಸುದ್ದಿಯನ್ನು ಮಾತ್ರ ಪ್ರಕಟಿಸಬೇಕು; ಬೇರೆ ಸುದ್ದಿ ಪ್ರಕಟಿಸದಂತೆ ಮಾಧ್ಯಮವನ್ನು ನಿರ್ಬಂಧಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸರ್ಕಾರವು ಅರ್ಜಿಯೊಂದನ್ನು ಸಲ್ಲಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿದೆ.

‘ಕೋವಿಡ್ ಪಿಡುಗಿನ ಕುರಿತು ವರದಿಗಾರಿಕೆಯನ್ನು ಪರೋಕ್ಷವಾಗಿ ನಿಯಂತ್ರಿಸಲು ಯತ್ನಿಸಿದ ಸರ್ಕಾರದ ಯತ್ನಕ್ಕೆ ಸುಪ್ರೀಂ ಕೋರ್ಟ್‌ನ ಬೆಂಬಲ ದೊರೆಯಲಿಲ್ಲ. ಆದರೆ, ವಿವಿಧ ಹಂತಗಳ ಅಧಿಕಾರಿಗಳನ್ನು ಬಳಸಿಕೊಂಡು, ಒತ್ತಡಕ್ಕೆ ಮಣಿಯದ ಪತ್ರಕರ್ತರನ್ನು ಗುರಿಯಾಗಿಸುವ ಪ್ರಯತ್ನ ಮುಂದುವರಿದಿದೆ’ ಎಂದು ಐಪಿಐ ಉಪ ನಿರ್ದೇಶಕ ಸ್ಕಾಟ್‌ ಗ್ರಿಫಿನ್‌ ಹೇಳಿದ್ದಾರೆ.

ADVERTISEMENT

ಐಪಿಐ ಉಲ್ಲೇಖಿಸಿದ ಪ್ರಕರಣಗಳು

* ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ ಆದ ಮರುದಿನವೇ,‘ದಿ ವೈರ್‌’ ಸುದ್ದಿ ಪೋರ್ಟಲ್‌ನ ಪ್ರಧಾನ‌ ಸಂಪಾದಕ ಸಿದ್ಧಾರ್ಥ ವರದರಾಜನ್‌ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿಯ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂಬ ಆರೋಪದಲ್ಲಿ ವಕೀಲರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ.ಉತ್ತರ ಪ್ರದೇಶದ ಮುಖ್ಯಮಂತ್ರಿಯು ಲಾಕ್‌ಡೌನ್‌ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಸಂಘಟಿಸುವ ಯೋಜನೆ ರೂಪಿಸುತ್ತಿದ್ದಾರೆ ಎಂದು ‘ದಿ ವೈರ್‌’ ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಬಳಿಕ, ‘ಇದು ಮಾಧ್ಯಮವನ್ನು ಹಣಿಯುವ ಯತ್ನ’ ಎಂದು 200ಕ್ಕೂ ಹೆಚ್ಚು ಪತ್ರಕರ್ತರು ಹೇಳಿಕೆ ನೀಡಿದ್ದರು. ಅದಾದ ನಂತರ, 3,500ಕ್ಕೂ ಹೆಚ್ಚು ಲೇಖಕರು, ನ್ಯಾಯತಜ್ಞರು, ವಿದ್ವಾಂಸರು ಪೊಲೀಸರ ಕ್ರಮ ಖಂಡಿಸಿ ಹೇಳಿಕೆ ನೀಡಿದ್ದರು

* ಲಾಕ್‌ಡೌನ್‌ ಸಂದರ್ಭದಲ್ಲಿ, ಬಡವರಿಗಾಗಿ ಸರ್ಕಾರವು ಹೆಲಿಕಾಪ್ಟರ್‌ಗಳ ಮೂಲಕ ಹಣ ಸುರಿಯಲಿದೆ ಎಂದು ವರದಿ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಪಬ್ಲಿಕ್‌ ಟಿ.ವಿ. ಸುದ್ದಿ ವಾಹಿನಿಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ನೋಟಿಸ್‌ ನೀಡಿದೆ

* ಲಾಕ್‌ಡೌನ್‌ ಹೇರಿಕೆಯಾದ ಮೇಲೆ ಹಲವು ಪತ್ರಕರ್ತರು ಪೊಲೀಸರ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ

* ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಬಳಿಕ, ಭದ್ರತಾ ಪಡೆ ಮತ್ತು ಪ್ರಾದೇಶಿಕ ಆಡಳಿತದಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಭಾರಿ ಬೆದರಿಕೆ ಎದುರಾಗಿದೆ

ಅಮರ್ತ್ಯ ಸೇನ್‌ ಆತಂಕ

‘ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ದಮನಿಸುವುದಕ್ಕೆ ಮತ್ತು ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆಗೆ ಚುನಾಯಿತ ಪ್ರತಿನಿಧಿಗಳು ನಡೆಸುತ್ತಿರುವ ದುರ್ವರ್ತನೆಯಿಂದಾಗಿ ಭಾರತದ ಪ್ರಜೆಯಾಗಿ ನಾನು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರು ಇತ್ತೀಚೆಗೆ ಲೇಖನವೊಂದರಲ್ಲಿ ಬರೆದಿದ್ದರು.

‘ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಸ್ವತಂತ್ರ ಪತ್ರಿಕೋದ್ಯಮ ಅನಿವಾರ್ಯ ಭಾಗ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಪತ್ರಕರ್ತರು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಲು ಅವಕಾಶ ದೊರೆಯುವಂತಾಗಬೇಕು ಎಂಬುದು ಭಾರತ ಸರ್ಕಾರಕ್ಕೆ ನಮ್ಮ ಕೋರಿಕೆ’ ಎಂದುಐಪಿಐ ಉಪ ನಿರ್ದೇಶಕಸ್ಕಾಟ್‌ ಗ್ರಿಫಿನ್‌ ಹೇಳಿದ್ದಾರೆ.

ಪತ್ರಿಕೋದ್ಯಮ ಮತ್ತು ಕೋವಿಡ್ ಸವಾಲು

ಕೊರೊನಾ ಪಿಡುಗು ಜಗತ್ತನ್ನೇ ವ್ಯಾಪಿಸಿರುವ ಈ ಸಂದರ್ಭವು ಪತ್ರಕರ್ತರಿಗೆ ಬಹುದೊಡ್ಡ ಸವಾಲು ಎಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್‌) ಸಂಘಟನೆಯು ಹೇಳಿದೆ. 2020ನೇ ಸಾಲಿನ ಮಾಧ್ಯಮ ಸ್ವಾತಂತ್ರ್ಯದ ಜಾಗತಿಕ ಶ್ರೇಯಾಂಕ ವರದಿಯಲ್ಲಿ ಹೀಗೆ ಹೇಳಲಾಗಿದೆ. ಮುಂದಿನ ಹತ್ತು ವರ್ಷಗಳು ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ನಿರ್ಣಾಯಕ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಜಗತ್ತಿನ 180 ದೇಶಗಳಲ್ಲಿ ಮಾಧ್ಯಮ ಸ್ವಾತಂತ್ರ್ಯ ಯಾವ ರೀತಿ ಇದೆ ಎಂಬುದನ್ನು ವಿಶ್ಲೇಷಿಸಿ ಶ್ರೇಯಾಂಕ ನೀಡುವ ಕೆಲಸವನ್ನು ಸಂಘಟನೆ ಮಾಡುತ್ತಿದೆ.

ಕೊರೊನಾ ಮತ್ತು ಬೆದರಿಕೆ

ಕೊರೊನಾ ಪಿಡುಗು ಹಾಗೂ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ವಿಚಾರದ ನಡುವೆ ಸ್ಪಷ್ಟ ಸಂಬಂಧ ಕಾಣಿಸುತ್ತಿದೆ. ಚೀನಾ ಮತ್ತು ಇರಾನ್ ಕೊರೊನಾಗೆ ಸಂಬಂಧಿಸದ ವಿಚಾರಗಳನ್ನು ವ್ಯಾಪಕವಾಗಿ ಸೆನ್ಸರ್‌ಗೆ ಒಳಪಡಿಸಿವೆ. ಇರಾಕ್‌ನಲ್ಲಿ ಕೊರೊನಾ ಸಾವಿನ ಸಂಖ್ಯೆಯನ್ನು ಪ್ರಶ್ನಿಸಿದ್ದಕ್ಕೆ ರಾಯಿಟರ್ಸ್‌ನ ಪರವಾನಗಿಯನ್ನು ಮೂರು ತಿಂಗಳು ಅಮಾನತಿನಲ್ಲಿ ಇರಿಸಲಾಗಿದೆ. ಯುರೋಪ್‌ನಲ್ಲೂ ಇಂತಹ ಯತ್ನಗಳು ನಡೆದಿವೆ. ಹಂಗರಿಯಲ್ಲಿ ತಪ್ಪು ಮಾಹಿತಿ ನೀಡಿದರೆ, ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಅಲ್ಲಿನ ಪ್ರಧಾನಿ ವಿಕ್ಟರ್ ಆರ್ಬನ್ ಜಾರಿ ಮಾಡಿದ್ದಾರೆ.

ಆರೋಗ್ಯ ಬಿಕ್ಕಟ್ಟು ಹೊಸ ಸವಾಲು

ಮುಂದಿನ ಹತ್ತು ವರ್ಷಗಳು ಪತ್ರಿಕಾ ಸ್ವಾತಂತ್ರ್ಯ ವಿಚಾರದಲ್ಲಿ ನಿರ್ಣಾಯಕ. ಐದು ವಿಚಾರಗಳು ಜಾಗತಿಕ ಪತ್ರಿಕೋದ್ಯಮಕ್ಕೆ ಸವಾಲು ಒಡ್ಡಲಿವೆ. ಇವುಗಳ ಜತೆಗೆ ಜಾಗತಿಕ ಆರೋಗ್ಯ ಬಿಕ್ಕಟ್ಟು ಹೊಸ ಸೇರ್ಪಡೆಯಾಗಿದ್ದು, ಪರಿಸ್ಥಿತಿಯನ್ನು ಇನ್ನಷ್ಟ ಜಟಿಲಗೊಳಿಸಲಿದೆ.

* ಭೌಗೋಳಿಕ ರಾಜಕೀಯ ಬಿಕ್ಕಟ್ಟು (ಸರ್ವಾಧಿಕಾರಿ ಆಡಳಿತಗಳ ಆಕ್ರಮಣಶೀಲತೆಯಿಂದಾಗಿ)

* ತಾಂತ್ರಿಕ ಬಿಕ್ಕಟ್ಟು (ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಾತರಿ ಕೊರತೆಯಿಂದಾಗಿ)

* ಪ್ರಜಾಪ್ರಭುತ್ವ ಬಿಕ್ಕಟ್ಟು (ಧ್ರುವೀಕರಣ ಮತ್ತು ದಮನಕಾರಿ ನೀತಿಗಳಿಂದಾಗಿ)

* ನಂಬಿಕೆಯ ಬಿಕ್ಕಟ್ಟು (ಮಾಧ್ಯಮಗಳ ಮೇಲಿನ ಅನುಮಾನ ಮತ್ತು ದ್ವೇಷದಿಂದಾಗಿ)

* ಆರ್ಥಿಕ ಬಿಕ್ಕಟ್ಟು (ಗುಣಮಟ್ಟದ ಪತ್ರಿಕೋದ್ಯಮ ದುರ್ಲಲಗೊಳಿಸುವಿಕೆಯಿಂದಾಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.