ADVERTISEMENT

ಜಾಗತಿಕ ಬಿಕ್ಕಟ್ಟು ಪರಿಹರಿಸುವ ದೇಶವಾಗಿ ಭಾರತ: ರುಚಿರಾ ಕಾಂಬೊಜ್‌

ಪಿಟಿಐ
Published 2 ಡಿಸೆಂಬರ್ 2022, 19:30 IST
Last Updated 2 ಡಿಸೆಂಬರ್ 2022, 19:30 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ಜಾಗತಿಕ ಬಿಕ್ಕಟ್ಟುಗಳಿಗೆ ಸೂಕ್ತ ಪರಿಹಾರ ಒದಗಿಸುವ ಮತ್ತು ಸಕಾರಾತ್ಮಕ ಕೊಡುಗೆ ನೀಡುವ ಬದ್ಧತೆಯ ದೇಶವಾಗಿ ವಿಶ್ವದ ಉನ್ನತ ಕೋಷ್ಟಕದಲ್ಲಿ ತನ್ನ ಸ್ಥಾನ ಪಡೆಯಲುಭಾರತ ಸಜ್ಜಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೊಜ್‌ ತಿಳಿಸಿದರು.

ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಸರದಿ ಪ್ರಕಾರ ಲಭಿಸುವ ಅಧ್ಯಕ್ಷ ಸ್ಥಾನವನ್ನು ಗುರುವಾರ ವಹಿಸಿಕೊಂಡು ಅವರು ಮಾತನಾಡಿದರು.

ಭದ್ರತಾ ಮಂಡಳಿಯಲ್ಲಿಡಿಸೆಂಬರ್‌ 1ರಿಂದ 31ರವರೆಗಿನ ತಿಂಗಳ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿದೆ.ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿಯಾಗಿ ರುಚಿರಾ ಅವರು, ಅತ್ಯಂತ ಪ್ರಭಾವಿ ಅಧ್ಯಕ್ಷರ ಸ್ಥಾನವನ್ನು ಒಂದು ತಿಂಗಳಿಗೆ ಅಲಂಕರಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡರು. 2021ರಆಗಸ್ಟ್ ನಂತರ ಎರಡನೇ ಬಾರಿಗೆ ಭಾರತವು ಭದ್ರತಾ ಮಂಡಳಿಯಚುನಾಯಿತ ಸದಸ್ಯ ಸ್ಥಾನ ಪಡೆದಿದೆ.

ADVERTISEMENT

ಕಳೆದ ಎರಡು ವರ್ಷಗಳಿಂದ ಜಗತ್ತು ಹಲವು ಬಿಕ್ಕಟ್ಟುಗಳೊಂದಿಗೆ ಸಾಗುತ್ತಿರುವಾಗ, ಭಾರತ ಯಾವಾಗಲೂ ಪರಿಹಾರ ಒದಗಿಸುವ ರಾಷ್ಟ್ರವಾಗಿಯೇ ಇದೆ.ಕೋವಿಡ್‌ 19 ಸಾಂಕ್ರಾಮಿಕ ರೋಗ ಉಲ್ಲೇಖಿಸಿ ಅವರು,ಭಾರತವು ಅಗತ್ಯವಿರುವ ದೇಶಗಳಿಗೆ ಔಷಧಿಗಳು, ವೈದ್ಯಕೀಯ ಉಪಕರಣಗಳು, ವೈದ್ಯಕೀಯ ತಂಡಗಳನ್ನು ಕಳುಹಿಸಿದೆ. 100ಕ್ಕೂ ಹೆಚ್ಚು ದೇಶಗಳಿಗೆ 2.40 ಕೋಟಿ ಕೋವಿಡ್‌ ಲಸಿಕೆಗಳನ್ನು ಪೂರೈಸಿದೆ.ಮಾನವೀಯ ಬಿಕ್ಕಟ್ಟುಗಳು ಎದುರಾದಾಗೆಲ್ಲ ಸ್ಪಂದಿಸಿದ್ದೇವೆ. ಈ ಎಲ್ಲ ಅಂಶಗಳುಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ರಾಷ್ಟ್ರವಾಗಿ ಭಾರತವು ವಿಶ್ವದ ಉನ್ನತ ಕೋಷ್ಟಕದಲ್ಲಿ ತನ್ನ ಸ್ಥಾನ ಪಡೆಯಲು ಸಿದ್ಧವಾಗಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದರು.

ಭಯೋತ್ಪಾದನೆ ಹತ್ತಿಕ್ಕಲು ಮತ್ತು ಬಹುಪಕ್ಷೀಯತೆ ಸುಧಾರಣೆಗೆ ಸಹಿ ಹಾಕುವ ಸಂದರ್ಭದಲ್ಲಿ ಮಾತನಾಡಿದ ರುಚಿರಾ, ‘ಪ್ರಜಾಪ್ರಭುತ್ವದ ರಕ್ಷಣೆಗೆ ಏನು ಮಾಡಬೇಕೆಂದು ಭಾರತಕ್ಕೆ ಯಾರೂ ಹೇಳಬೇಕಾಗಿಲ್ಲ. ಭಾರತವು ಎಲ್ಲರಿಗೂ ತಿಳಿದಿರುವಂತೆ ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಯ ದೇಶ. ನಮ್ಮ ಪ್ರಜಾಪ್ರಭುತ್ವದ ಬೇರುಗಳು 2,500 ವರ್ಷಗಳ ಹಿಂದಿನವು. ನಾವು ಯಾವಾಗಲೂ ಪ್ರಜಾಪ್ರಭುತ್ವವಾಗಿಯೇ ಬದುಕಿದ್ದೇವೆ’ ಎಂದು, ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಕುರಿತ ಪ್ರಶ್ನೆಗೆ ಉತ್ತರಿಸಿದರು.

–––

ಬಾಕ್ಸ್‌

‘ರಷ್ಯಾ– ಉಕ್ರೇನ್‌ ಬಿಕ್ಕಟ್ಟು: ಭಾರತ ಮೌನಿಯಲ್ಲ’

‘ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತ ಏನೂ ಮಾಡದೇ ಕೈಕಟ್ಟಿ ನಿಷ್ಕ್ರಿಯವಾಗಿ ಕುಳಿತ್ತಿಲ್ಲ. ಉಭಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಲೇ ಇದೆ. ಭಾರತವು ಶಾಂತಿಯ ಕಡೆಗಿದ್ದು, ರಾಜತಾಂತ್ರಿಕತೆ ಮತ್ತು ಮಾತುಕತೆ ಮೂಲಕಬಿಕ್ಕಟ್ಟು ಶಮನಕ್ಕೆ ಒಲವು ತೋರಿಸಿದೆ’ ಎಂದುರುಚಿರಾ ಕಾಂಬೊಜ್‌ ಹೇಳಿದರು.

‘ಭಾರತವು ರಷ್ಯಾ ಜೊತೆ ಪ್ರಮುಖವಾದ ಸಂಬಂಧ ಹೊಂದಿದೆ.ಉಕ್ರೇನ್ ಸಂಘರ್ಷದ ಆರಂಭದಿಂದಲೂ ನಮ್ಮ ನಿಲುವು ಸ್ಥಿರ ಮತ್ತು ದೃಢವಾಗಿರುವುದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಸಂಘರ್ಷ ಕೊನೆಗೊಳಿಸಲು ರಾಜತಾಂತ್ರಿಕ ಮತ್ತು ಮಾತುಕತೆ ಮಾರ್ಗ ಅನುಸರಿಸುವುದನ್ನು ಭಾರತ ಬೆಂಬಲಿಸುತ್ತಾ ಬಂದಿದೆ’ ಎಂದು ಅವರುಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಷ್ಯಾ ವಿರೋಧಿ ಮತ್ತು ಚೀನಿ ವಿರೋಧಿ ಮೈತ್ರಿಗೆ ಭಾರತವನ್ನು ಎಳೆದುಕೊಳ್ಳಲು ನ್ಯಾಟೊ ಯತ್ನಿಸುತ್ತಿದೆ ಎಂಬ ರಷ್ಯಾ ವಿದೇಶಾಂಗ ಸಚಿವ ಸೆರ್ಗೈ ಲಾವ್ರೊವ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಉಭಯ ರಾಷ್ಟ್ರಗಳ ನಾಯಕರ ಜತೆ ಮಾತುಕತೆ ನಡೆಸುತ್ತಲೇ ಇದ್ದಾರೆ. ‘ಇದು ಯುದ್ಧದ ಯುಗವಲ್ಲ’ ಎಂದು ಮೋದಿಯವರು ಹೇಳಿದ ಮಾತು ಜಾಗತಿಕವಾಗಿ ಸ್ವೀಕೃತವಾಗಿದೆ. ಬಾಲಿಯ ಜಿ20 ಶೃಂಗದ ಘೋಷಣೆಯಲ್ಲೂ ಮೋದಿ ಅವರ ಈ ಮಾತು ಅನುರಣಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.