ಕೊಲೊಂಬೊ: ಶ್ರೀಲಂಕಾದ ಭಾರತೀಯ ರಾಯಭಾರಿ ಸಂತೋಷ್ ಝಾ ಅವರು ಆಡಳಿತಾರೂಢ ಜನತಾ ವಿಮುಕ್ತಿ ಪೆರುಮನ (ಜೆವಿಪಿ) ಪ್ರಧಾನ ಕಾರ್ಯದರ್ಶಿ ಟಿಲ್ವಿನ್ ಸಿಲ್ವಾ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಪಾಲುದಾರಿಕೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ನಿಕಟ ಆರ್ಥಿಕ ಸಂಬಂಧಗಳ ಸಾಮರ್ಥ್ಯದ ಕುರಿತು ಚರ್ಚಿಸಿದ್ದಾರೆ.
ಈ ಬಗ್ಗೆ ಕೊಲೊಂಬೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ‘ಭಾರತ ಮತ್ತು ಶ್ರೀಲಂಕಾದ ಜನರ ಪರಸ್ಪರ ಸಮೃದ್ಧಿಗಾಗಿ ನಿಕಟ ಆರ್ಥಿಕ ಸಂಬಂಧಗಳ ಅಪರಿಮಿತ ಸಾಮರ್ಥ್ಯದ ಕುರಿತು ಇಬ್ಬರೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು’ ಎಂದು ಹೇಳಿದೆ.
ಬಟ್ಟರಾಮುಲ್ಲಾದ ಪೆಲವಟ್ಟೆಯಲ್ಲಿರುವ ಜೆವಿಪಿ ಪ್ರಧಾನ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ, ದೇಶದ ನಿರಾಶ್ರಿತ ಗುಡ್ಡಗಾಡು ಸಮುದಾಯಗಳಿಗೆ ನೀಡಲಾದ ವಸತಿ ಯೋಜನೆಯ ಯಶಸ್ಸು ಸೇರಿದಂತೆ ಶ್ರೀಲಂಕಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಯಿತು ಎಂದು ಶ್ರೀಲಂಕಾ ಮಿರರ್ ಮಂಗಳವಾರ ವರದಿ ಮಾಡಿದೆ.
ಭಾರತದ ಕೊಡುಗೆಗೆ ಸಿಲ್ವಾ ಕೃತಜ್ಞತೆ ಸಲ್ಲಿಸಿದರೆ, ಭಾರತೀಯ ರಾಯಭಾರಿ ಶ್ರೀಲಂಕಾಕ್ಕೆ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.