ADVERTISEMENT

ಕೊರೊನಾ ವೈರಸ್‌: ವುಹಾನ್‌ಗೆ ವೈದ್ಯಕೀಯ ಸಾಮಗ್ರಿ ಕಳುಹಿಸಲಿದೆ ಭಾರತ

ಕೊರೊನಾ ವೈರಸ್‌

ಪಿಟಿಐ
Published 18 ಫೆಬ್ರುವರಿ 2020, 3:55 IST
Last Updated 18 ಫೆಬ್ರುವರಿ 2020, 3:55 IST
ಚೀನಾದ ಫುಜಿಯಾನ್‌ ಪ್ರಾಂತ್ಯದಲ್ಲಿ ಮುಖಗವಸು ತಯಾರಿಸುತ್ತಿರುವ ಕಾರ್ಮಿಕರು -----–ರಾಯಿಟರ್ಸ್ ಚಿತ್ರ
ಚೀನಾದ ಫುಜಿಯಾನ್‌ ಪ್ರಾಂತ್ಯದಲ್ಲಿ ಮುಖಗವಸು ತಯಾರಿಸುತ್ತಿರುವ ಕಾರ್ಮಿಕರು -----–ರಾಯಿಟರ್ಸ್ ಚಿತ್ರ   

ಬೀಜಿಂಗ್‌: ಕೊರೊನಾ ವೈರಸ್‌ ಸೋಂಕಿನ ಕೇಂದ್ರಬಿಂದುವಾಗಿರುವ ವುಹಾನ್‌ ನಗರಕ್ಕೆ ಭಾರತವು ವಿಶೇಷ ವಿಮಾನದ ಮೂಲಕ ವೈದ್ಯಕೀಯ ಸಾಮಗ್ರಿಗಳನ್ನು ಈ ವಾರ ಕಳುಹಿಸಲಿದೆ. ಇನ್ನೂ ಸಿಲುಕಿರುವ ಭಾರತೀಯರನ್ನು ಮತ್ತು ನೆರೆ ರಾಷ್ಟ್ರಗಳ ನಾಗರಿಕರನ್ನು ಇದೇ ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಿದೆ ಎಂದು ಭಾರತೀಯ ರಾಯಭಾರ ಕಚೇರಿ ಸೋಮವಾರ ಹೇಳಿದೆ.

ವುಹಾನ್‌ಗೆ ಬರಲಿರುವ ವಿಶೇಷ ವಿಮಾನದಲ್ಲಿ ಭಾರತೀಯರಲ್ಲದೇ, ಅದರ ಸಾಮರ್ಥ್ಯಕ್ಕನುಗುಣವಾಗಿ ನೆರೆ ದೇಶಗಳ ನಾಗರಿಕರನ್ನು ಸಹ ಕರೆದೊಯ್ಯಲಾಗುತ್ತದೆ ಎಂದು ಚೀನಾದ ಭಾರತೀಯ ರಾಯಭಾರಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ.

ಈ ವೈರಸ್‌ ಸೋಂಕಿಗೆ ಮತ್ತೆ 105 ಮಂದಿ ಬಲಿಯಾಗಿದ್ದು, ಈವರೆಗೆ ಒಟ್ಟು 1,770 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕೋವಿಡ್‌–19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಎಲ್ಲ ಕ್ರಮಗಳಿಗೆ ಭಾರತ ಚೀನಾಕ್ಕೆ ಸಹಾಯ ಮಾಡಲಿದೆ. ಈ ವಾರದ ಅಂತ್ಯಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಭಾರತ ಕಳುಹಿಸಲಿದೆ. ನಂತರ ವಿಶೇಷ ವಿಮಾನದಲ್ಲಿ ಭಾರತೀಯರನ್ನು ಮರಳಿ ಕರೆದೊಯ್ಯಲಿದೆ. ಭಾರತೀಯರು ರಾಯಭಾರಿ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಮಿಸ್ರಿ ತಿಳಿಸಿದ್ದಾರೆ.

ಈಗಾಗಲೇ 647 ಭಾರತೀಯರನ್ನು ಮರಳಿ ಕರೆದೊಯ್ಯಲಾಗಿದೆ. ಇನ್ನೂ 80 ರಿಂದ 100 ಮಂದಿ ಭಾರತೀಯರಿದ್ದು, ಅವರನ್ನು ಸಹ ಕರೆದೊಯ್ಯಲಾಗುವುದು. ಜೊತೆಗೆ ನೆರೆ ರಾಷ್ಟ್ರಗಳ ಜನರನ್ನು ಕರೆದೊಯ್ಯಲಾಗುತ್ತದೆ. ಈ ಕುರಿತು ಚೀನಾ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಅಗತ್ಯ ಅನುಮತಿ ನೀಡುವಂತೆ ಕೊರಲಾಗಿದೆ ಎಂದು ಅವರು ಹೇಳಿದ್ದಾರೆ.

ಹಡಗಿನಲ್ಲಿರುವ ಭಾರತೀಯರ ಸ್ಪಂದನೆ
ಟೋಕಿಯೊ:
ಜಪಾನ್‌ ಕಡಲತಡಿಯಲ್ಲಿ ಪ್ರವೇಶ ನಿರ್ಬಂಧಕ್ಕೆ ಒಳಗಾಗಿರುವ ಐಷಾರಾಮಿ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ಕೋವಿಡ್‌–19 ಸೋಂಕಿಗೊಳಗಾಗಿರುವ ನಾಲ್ವರು ಭಾರತೀಯರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ತಿಳಿಸಿದೆ.

ಹಡಗಿನಲ್ಲಿ ಸೋಂಕಿಗೀಡಾದವರ ಸಂಖ್ಯೆ 454ಕ್ಕೆ ಏರಿದೆ ಎಂದು ಜಪಾನ್‌ನ ಮಾಧ್ಯಮವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.