ನವದೆಹಲಿ: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿಚಾರವಾಗಿ ಅಮೆರಿಕದ ನಿಯೋಗದ ಜೊತೆಗಿನ ಮಾತುಕತೆಯು ಸಕಾರಾತ್ಮಕವಾಗಿ ಇತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.
ಇಬ್ಬರಿಗೂ ಅನುಕೂಲ ಆಗುವ ಒಪ್ಪಂದವೊಂದಕ್ಕೆ ಆದಷ್ಟು ಬೇಗ ಅಂತಿಮ ರೂಪ ನೀಡಲು ಎರಡೂ ದೇಶಗಳು ಒಪ್ಪಿವೆ ಎಂದು ಕೂಡ ಸಚಿವಾಲಯವು ಹೇಳಿದೆ.
‘ಎರಡೂ ಕಡೆಯವರಿಗೆ ಪ್ರಯೋಜನಕಾರಿ ಆಗುವಂತಹ ವ್ಯಾಪಾರ ಒಪ್ಪಂದವನ್ನು ಬೇಗನೆ ಸಾಧ್ಯವಾಗಿಸುವ ಪ್ರಯತ್ನಕ್ಕೆ ಇನ್ನಷ್ಟು ಚುರುಕು ನೀಡಲು ತೀರ್ಮಾನಿಸಲಾಗಿದೆ’ ಎಂದು ಸಚಿವಾಲಯವು ಹೇಳಿದೆ. ಎರಡೂ ದೇಶಗಳ ಪ್ರತಿನಿಧಿಗಳ ನಡುವೆ ಮಂಗಳವಾರ ಇಡೀ ದಿನ ಮಾತುಕತೆ ನಡೆದಿದೆ.
ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಅವರ ಜೊತೆ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಗಳು ಧನಾತ್ಮಕವಾಗಿದ್ದವು ಎಂದು ಸಚಿವಾಲಯವು ಹೇಳಿದೆ.
ಲಿಂಚ್ ಅವರು ಸೋಮವಾರ ಸಂಜೆ ನವದೆಹಲಿಗೆ ಬಂದಿದ್ದಾರೆ. ಮಾತುಕತೆ ವೇಳೆ ಭಾರತದ ಪ್ರತಿನಿಧಿಗಳ ನೇತೃತ್ವವನ್ನು ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ವಹಿಸಿದ್ದರು.
ಎರಡೂ ದೇಶಗಳು ವರ್ಚುವಲ್ ವೇದಿಕೆಯ ಮೂಲಕ ಮಾತುಕತೆ ಮುಂದುವರಿಸಲಿವೆ. ಅಲ್ಲದೆ, ಮುಂದಿನ ಭೌತಿಕ ಸಭೆಗೆ ಸೂಕ್ತ ದಿನಾಂಕ ಯಾವುದು ಎಂಬುದನ್ನು ಕೂಡ ನಿರ್ಧರಿಸಲಿವೆ ಎಂದು ಮೂಲವೊಂದು ತಿಳಿಸಿದೆ.
ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದೆ. ಪ್ರತಿಸುಂಕದ ರೂಪದಲ್ಲಿ ಶೇ 25ರಷ್ಟು ತೆರಿಗೆ ಹಾಗೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ಈ ತೆರಿಗೆ ಕ್ರಮಗಳು ಜಾರಿಗೆ ಬಂದ ನಂತರದಲ್ಲಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ವ್ಯಾಪಾರ ಒಪ್ಪಂದದ ಮಾತುಕತೆಗೆ ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಶೇ 50ರಷ್ಟು ತೆರಿಗೆ ವಿಧಿಸುವ ಕ್ರಮವನ್ನು ಭಾರತವು ‘ಅನ್ಯಾಯ’ ಎಂದು ಹೇಳಿದೆ.
ಮಾತುಕತೆ ಮುಂದುವರಿಯಬೇಕು ಎಂದಾದರೆ ಭಾರತದ ಮೇಲೆ ಹೇರಿರುವ ಹೆಚ್ಚುವರಿ ಶೇ 25ರಷ್ಟು ಸುಂಕವನ್ನು ರದ್ದುಪಡಿಸಬೇಕು ಎಂದು ಭಾರತದ ಅಧಿಕಾರಿಗಳು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
‘ಮಾತುಕತೆಯಲ್ಲಿ ಪ್ರಗತಿಯು, ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದ ಶೇ 25ರಷ್ಟು ತೆರಿಗೆಯನ್ನು ಅಮೆರಿಕವು ಹಿಂಪಡೆಯುವುದನ್ನು ಅವಲಂಬಿಸಿದೆ. ಅದು ಸಾಧ್ಯವಾಗದೆ ಇದ್ದರೆ ರಾಜಕೀಯವಾಗಿ ಅಥವಾ ಆರ್ಥಿಕ ದೃಷ್ಟಿಯಿಂದ ಯಾವುದೇ ಮಹತ್ವದ ತಿರುವು ಲಭಿಸುವುದಿಲ್ಲ’ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್‌ನ (ಜಿಟಿಆರ್‌ಐ) ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.