ಡೊನಾಲ್ಡ್ ಟ್ರಂಪ್
–ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಜನ್ಮದಿಂದ ಸಿಗುವ ಅಮೆರಿಕ ಪೌರತ್ವ ಹಕ್ಕನ್ನು ರದ್ದುಪಡಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶವನ್ನು ಭಾರತೀಯ ಅಮೆರಿಕನ್ ಸಂಸದರು ತೀವ್ರವಾಗಿ ವಿರೋಧಿಸಿದ್ದಾರೆ.
ಅಧ್ಯಕ್ಷರ ಈ ಕ್ರಮವು ವಿಶ್ವದ ವಿವಿಧೆಡೆಯಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬಂದಿರುವವರ ಮೇಲಷ್ಟೇ ಅಲ್ಲದೆ, ಶಿಕ್ಷಣ ಮತ್ತು ಉದ್ಯೋಗ ಅರಸಿ ಅಮೆರಿಕಕ್ಕೆ ಬಂದಿರುವ ಭಾರತೀಯರ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ರಂಪ್ ಅವರು ದಾಖಲೆರಹಿತ ವಲಸಿಗರಿಗೆ ಜನಿಸಿದ ಮಕ್ಕಳನ್ನು ಇನ್ನು ಮುಂದೆ ದೇಶದ ನಾಗರಿಕರಾಗಿ ಪರಿಗಣಿಸಲು ಆಗುವುದಿಲ್ಲ ಎಂದು ಘೋಷಿಸುವ ಆದೇಶಕ್ಕೆ ಸಹಿ ಹಾಕಿದರು. ವಿದೇಶಿ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಸೇರಿದಂತೆ ಕಾನೂನುಬದ್ಧವಾಗಿ ದೇಶದಲ್ಲಿರುವ ಆದರೆ ತಾತ್ಕಾಲಿಕವಾಗಿ ವಾಸವಿರುವ ತಾಯಂದಿರ ಮಕ್ಕಳಿಗೂ ಇದು ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಆದೇಶದ ಪ್ರಕಾರ, ಪೋಷಕರಲ್ಲಿ ಒಬ್ಬರು ಅಮೆರಿಕದ ಪ್ರಜೆ ಅಥವಾ ಕಾನೂನುಬದ್ಧ ಶಾಶ್ವತ ನಿವಾಸಿ ಆಗಿಲ್ಲದಿದ್ದರೆ 2025ರ ಫೆಬ್ರುವರಿ 19ರ ನಂತರ ಅವರಿಗೆ ಜನಿಸಿದ ಮಕ್ಕಳಿಗೆ ಸ್ವಯಂಚಾಲಿತವಾಗಿ ಪೌರತ್ವ ದೊರೆಯುವುದಿಲ್ಲ. ದೇಶದ ನಾಗರಿಕಲ್ಲದವರಿಗೆ ಜನಿಸಿದ ಮಕ್ಕಳು ಅಮೆರಿಕದ ಕಾನೂನು ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ, ಸಂವಿಧಾನದ 14ನೇ ತಿದ್ದುಪಡಿ ಅಡಿ ಪೌರತ್ವದ ಖಾತರಿಗೆ ಅವರು ಒಳಪಡುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
‘ಜನ್ಮದಿಂದ ದೊರೆಯುವ ಪೌರತ್ವ ಹಕ್ಕಿನಲ್ಲಿ ಬದಲಾವಣೆ ಸಂಬಂಧ ಹೊರಡಿಸಲಾಗಿರುವ ಆದೇಶವು ಅಕ್ರಮ ಮತ್ತು ದಾಖಲೆರಹಿತ ವಲಸಿಗರ ನವಜಾತ ಶಿಶುಗಳ ಮೇಲೆ ಪರಿಣಾಮ ಬೀರುವುದರ ಜತೆಗೆ ಎಚ್–1ಬಿ ವೀಸಾದಡಿ ಕಾನೂನುಬದ್ಧವಾಗಿ ದೇಶದಲ್ಲಿ ಉಳಿದಿರುವವರ ಮೇಲೂ ಪರಿಣಾಮ ಬೀರುತ್ತದೆ’ ಎಂದು ಭಾರತೀಯ ಅಮೆರಿಕನ್ ಸಂಸದ ರೋ ಖನ್ನಾ ಬೇಸರ ವ್ಯಕ್ತಪಡಿಸಿದ್ದಾರೆ.
‘ಎಚ್–1ಬಿ ವಲಸೆ ರಹಿತ ವೀಸಾ ಆಗಿದೆ. ತಾಂತ್ರಿಕ ಪರಿಣತಿ ಹೊಂದಿರುವ ವಿದೇಶಿಯರನ್ನು ಉದ್ಯೋಗಿಗಳನ್ನಾಗಿ ನೇಮಿಸಿಕೊಳ್ಳಲು ಇದು ಅಮೆರಿಕದ ಕಂಪನಿಗಳಿಗೆ ಅವಕಾಶ ನೀಡುತ್ತದೆ. ಹಲವು ಕಂಪನಿಗಳು ಭಾರತ, ಚೀನಾದಂತಹ ದೇಶಗಳಿಂದ ಸಹಸ್ರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಈ ವೀಸಾವನ್ನು ಅವಲಂಬಿಸಿವೆ’ ಎಂದು ಅವರು ಹೇಳಿದ್ದಾರೆ.
‘ಕಾನೂನುಬದ್ಧವಾಗಿ ಎಚ್–1ಬಿ/ಎಚ್2ಬಿ ವೀಸಾ, ವಿದ್ಯಾರ್ಥಿ ವೀಸಾ, ವ್ಯಾಪಾರ ವೀಸಾ ಅಡಿ ಅಮೆರಿಕದಲ್ಲಿ ವಾಸಿಸುತ್ತಿರುವವರಿಗೆ ಜನಿಸಿದ ಮಕ್ಕಳಿಗೂ ಟ್ರಂಪ್ ಆದೇಶವು ಪೌರತ್ವದ ಹಕ್ಕನ್ನು ನಿರಾಕರಿಸುತ್ತದೆ’ ಎಂದು ಖನ್ನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಟ್ರಂಪ್ ಅವರು ಏನೇ ಹೇಳಲಿ ಅಥವಾ ಮಾಡಲಿ. ಜನ್ಮದಿಂದ ಸಿಗುವ ಪೌರತ್ವವು ಈ ನೆಲದ ಕಾನೂನು ಆಗಿದೆ ಮತ್ತು ಆಗಿರುತ್ತದೆ. ಇದರ ರಕ್ಷಣೆಗಾಗಿ ಪಣತೊಟ್ಟು ಹೋರಾಡುತ್ತೇನೆ’ ಎಂದು ಮತ್ತೊಬ್ಬ ಭಾರತೀಯ ಅಮೆರಿಕನ್ ಸಂಸದ ಶ್ರೀ ಥಾಣೇದಾರ್ ಪ್ರತಿಕ್ರಿಯಿಸಿದ್ದಾರೆ.
‘ಇದು ಅಸಾಂವಿಧಾನಿಕ ಕ್ರಮವಾಗಿದ್ದು, ಒಂದು ಸಹಿಯಿಂದ ಅದನ್ನು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ದೇ ಆದರೆ ನಮ್ಮ ದೇಶದ ಕಾನೂನು ಮತ್ತು ಸಂವಿಧಾನವನ್ನು ಅಪಹಾಸ್ಯ ಮಾಡಿದಂತಾಗುತ್ತದೆ’ ಎಂದು ಸಂಸದೆ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.
ಆದೇಶ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಜನ್ಮದಿಂದಾಗಿ ಸಿಗುವ ಪೌರತ್ವ ಹಕ್ಕು ರದ್ದುಪಡಿಸಿರುವ ಆದೇಶವನ್ನು ಅಮೆರಿಕದ 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ‘ದೇಶದಲ್ಲಿ ಜನ್ಮದಿಂದ ದೊರೆಯುವ ಪೌರತ್ವವನ್ನು ಸಂವಿಧಾನದ 14ನೇ ತಿದ್ದುಪಡಿ ಅಡಿಯಲ್ಲಿ ನೀಡಲಾಗಿದೆ. ಇದನ್ನು ಪರಿಷ್ಕರಿಸಲು ಅಧ್ಯಕ್ಷರು ಅಥವಾ ಕಾಂಗ್ರೆಸ್‌ಗೆ ಸಾಂವಿಧಾನಿಕ ಅಧಿಕಾರವಿಲ್ಲ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಈ ಕುರಿತ ಅಧ್ಯಕ್ಷರ ಆದೇಶಕ್ಕೆ ತುರ್ತಾಗಿ ತಡೆಯಾಜ್ಞೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಇನ್ನೊಂದೆಡೆ 22 ರಾಜ್ಯಗಳು ಹೂಡಿರುವ ದಾವೆಗಳನ್ನು ಎದುರಿಸಲು ಸಿದ್ಧ ಎಂದು ಶ್ವೇತಭವನ ಹೇಳಿದೆ. ‘ರಾಜ್ಯಗಳ ಈ ನಡೆಯು ಅಧ್ಯಕ್ಷ ಟ್ರಂಪ್ ಕೈಗೊಂಡ ಕ್ರಮಕ್ಕೆ ಎಡಪಂಥೀಯರ ಪ್ರತಿರೋಧದ ಮುಂದುವರಿದ ಭಾಗವಾಗಿದೆ’ ಎಂದು ಶ್ವೇತಭವನ ತಿಳಿಸಿದೆ. ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶವನ್ನು ಅಸಾಂವಿಧಾನಿಕ ಎಂದು ಆರೋಪಿಸಿರುವ ವಲಸೆ ಹಕ್ಕುಗಳ ಗುಂಪು ಸಹ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.