ADVERTISEMENT

ಕೋವಿಡ್ ಪರಿಹಾರ ಯೋಜನೆಯಡಿ ₹ 174 ಕೋಟಿ ವಂಚನೆ: ತಪ್ಪೊಪ್ಪಿಕೊಂಡ ಅನಿವಾಸಿ ಭಾರತೀಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 2:28 IST
Last Updated 26 ಮಾರ್ಚ್ 2021, 2:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಟೆಕ್ಸಾಸ್‌ನ ನಿವಾಸಿ, ಭಾರತೀಯ-ಅಮೆರಿಕನ್ ವ್ಯಕ್ತಿಯೊಬ್ಬರು ಕೋವಿಡ್–19 ಪರಿಹಾರ ಯೋಜನೆಯಡಿ24 ಮಿಲಿಯನ್ ಅಮೆರಿಕ ಡಾಲರ್ (ಸುಮಾರು ₹174 ಕೋಟಿ) ವಂಚನೆ ಆರೋಪದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ತಮ್ಮ ಒಡೆತನದ ಅಥವಾ ನಿಯಂತ್ರಣದಲ್ಲಿರುವ ವಿವಿಧ ಉದ್ದೇಶಿತ ವ್ಯವಹಾರಗಳ ಎಂಟು ವಿಭಿನ್ನ ಸಂಸ್ಥೆಗಳ ಮೂಲಕ 'ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ' (ಪಿಪಿಪಿ) ಅಡಿಯಲ್ಲಿ 15 ಮೋಸದ ಅರ್ಜಿಗಳನ್ನು ಸಲ್ಲಿಸಿರುವುದಾಗಿ 55ರ ಹರೆಯದ ದಿನೇಶ್ ಸಾಹ್ ಅವರು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ಹೇಳುತ್ತವೆ.

ಈ ವ್ಯವಹಾರಗಳು ಹಲವಾರು ಉದ್ಯೋಗಿಗಳನ್ನು ಹೊಂದಿದ್ದು, ನೂರಾರು ಸಾವಿರ ಡಾಲರ್‌ ವೇತನದಾರರ ವೆಚ್ಚವನ್ನು ಹೊಂದಿವೆ ಎಂದು ದಿನೇಶ್, ಅರ್ಜಿಗಳಲ್ಲಿ ತಿಳಿಸಿದ್ದರು. ವಾಸ್ತವವಾಗಿ, ಈ ಸಂಸ್ಥೆಗಳು ಯಾವುದೇ ಉದ್ಯೋಗಿಗಳನ್ನು ಹೊಂದಿಲ್ಲ ಮತ್ತು ಪಿಪಿಪಿ ಅರ್ಜಿಗಳಲ್ಲಿ ನಮೂದಿಸಲಾದ ಮೊತ್ತಕ್ಕೆ ಅನುಗುಣವಾಗಿ ವೇತನವನ್ನು ಪಾವತಿಸಿಲ್ಲ ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಬಹಿರಂಗವಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ADVERTISEMENT

ನ್ಯಾಯಾಲಯದ ದಾಖಲೆಗಳ ಪ್ರಕಾರ, ದಿನೇಶ್ ಅವರು ತಮ್ಮ ಅರ್ಜಿಗಳನ್ನು ಬೆಂಬಲಿಸಲು ಸುಳ್ಳು ದಾಖಲಾತಿಗಳನ್ನು ಸಲ್ಲಿಸಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಅಸ್ತಿತ್ವದಲ್ಲಿಲ್ಲದ ವ್ಯವಹಾರಗಳ ಬಗ್ಗೆ ಸುಳ್ಳು ತೆರಿಗೆ ಸಲ್ಲಿಕೆಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಸೇರಿವೆ. ಇದೇವೇಳೆ, ಬೇರೆ ವ್ಯಕ್ತಿಗಳಿಗೆ ಅಧಿಕಾರವಿಲ್ಲದಿದ್ದರೂ ಅವರನ್ನು ಈ ವ್ಯವಹಾರಗಳ ಅಧಿಕೃತ ಪ್ರತಿನಿಧಿಗಳೆಂದು ತಪ್ಪಾಗಿ ತೋರಿಸಲಾಗಿದೆ.

"ಜಾಗತಿಕ ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶವು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಸಣ್ಣ ಉದ್ಯಮಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಜಾರಿಗೆ ಬಂದಿರುವ ಪಿಪಿಪಿ ನಿಧಿಯಲ್ಲಿ 17 ಮಿಲಿಯನ್ ಡಾಲರ್‌ (ಸುಮಾರು 174 ಕೋಟಿ) ಗಳನ್ನು ದಿನೇಶ್
ಮೋಸದಿಂದ ಪಡೆದುಕೊಂಡಿದ್ದಾರೆ. ಆ ಹಣವನ್ನು ಐಷಾರಾಮಿ ಕಾರುಗಳು ಮತ್ತು ಮನೆಗಳನ್ನು ಖರೀದಿಸಲು ಖರ್ಚು ಮಾಡಿದ್ದಾರೆ" ಎಂದು ನ್ಯಾಯಾಂಗದ ಅಪರಾಧ ವಿಭಾಗದ ಅಸಿಸ್ಟೆಂಟ್ ಅಟಾರ್ನಿ ಜನರಲ್ ನಿಕೋಲಸ್ ಎಲ್ ಮೆಕ್ವೈಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.