ADVERTISEMENT

ಟ್ರಂಪ್ ಟ್ವಿಟ್ಟರ್ ಖಾತೆ ಶಾಶ್ವತವಾಗಿ ಅಮಾನತು ಆದೇಶದ ಹಿಂದೆ ಭಾರತೀಯ ಸಂಜಾತೆ

ಏಜೆನ್ಸೀಸ್
Published 11 ಜನವರಿ 2021, 14:41 IST
Last Updated 11 ಜನವರಿ 2021, 14:41 IST
ವಿಜಯಾ ಗದ್ದೆ ಟ್ವಿಟ್ಟರ್ ಖಾತೆಯ ಫೋಟೋ
ವಿಜಯಾ ಗದ್ದೆ ಟ್ವಿಟ್ಟರ್ ಖಾತೆಯ ಫೋಟೋ    

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಗಳನ್ನು ಶಾಶ್ವತವಾಗಿ ಅಮಾನತು ಆದೇಶದ ಹಿಂದೆ ಟ್ವಿಟ್ಟರ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ವಕೀಲೆ ಭಾರತ ಮೂಲದ ವಿಜಯಾ ಗದ್ದೆ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಕ್ಯಾಪಿಟಲ್ ಹಿಲ್ಸ್ ಗಲಭೆ ಬಳಿಕ ಟ್ರಂಪ್ ಟ್ವಿಟ್ಟರ್ ಖಾತೆಯ ಪೋಸ್ಟ್‌ಗಳು ಗಲಭೆಕೋರರಿಗೆ ಉತ್ತೇಜನ ಮತ್ತು ಬೆಂಬಲ ನೀಡಿವೆ ಎಂದು ಪರಿಗಣಿಸಿದ ಟೆಕ್ ಸಂಸ್ಥೆ ಅವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಶುಕ್ರವಾರ ನಿಷೇಧ ಮಾಡಿತ್ತು.

"ಮತ್ತಷ್ಟು ಹಿಂಸಾಚಾರದ ಅಪಾಯದಿಂದಾಗಿ @realDonaldTrump ಅವರ ಖಾತೆಯನ್ನು ಟ್ವಿಟರ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ನಾವು ನಮ್ಮ ನೀತಿ ಜಾರಿ ವಿಶ್ಲೇಷಣೆಯನ್ನು ಸಹ ಪ್ರಕಟಿಸಿದ್ದೇವೆ- ನೀವು ನಮ್ಮ ನಿರ್ಧಾರದ ಬಗ್ಗೆ ಇಲ್ಲಿ ಇನ್ನಷ್ಟು ಓದಬಹುದು. " ಎಂದು ಕಂಪನಿಯ ಕಾನೂನು, ನೀತಿ ಮತ್ತು ನಂಬಿಕೆ–ಸುರಕ್ಷತೆ ವಿಷಯಗಳ ವಿಭಾಗದ ಮುಖ್ಯಸ್ಥೆ ವಿಜಯ ಗದ್ದೆ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ADVERTISEMENT

ಭಾರತದಲ್ಲಿ ಜನಿಸಿದ ವಿಜಯಾ ಗದ್ದೆ, ಕೆಮಿಕಲ್ ಇಂಜಿನಿಯರ್ ಆಗಿದ್ದ ತಂದೆ ಕೆಲಸ ಮಾಡುತ್ತಿದ್ದ ಟೆಕ್ಸಾಸ್‌ಗೆ ಬಾಲ್ಯಾವಸ್ಥೆಯಲ್ಲೇ ಸ್ಥಳಾಂತರವಾದರು. ಬಳಿಕ ಅವರ ಕುಟುಂಬ ಪೂರ್ವ ಕರಾವಳಿಗೆ ಶಿಫ್ಟ್ ಆಯಿತು. ವಿಜಯಾ ಅಲ್ಲಿಯೇ ಪ್ರೌಢಶಾಲೆ ಶಿಕ್ಷಣ ಮುಗಿಸಿದರು.

ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಪದವೀಧರರಾದ ಗದ್ದೆ ಅವರು 2011ರಲ್ಲಿ ಸೋಷಿಯಲ್-ಮೀಡಿಯಾ(ಟ್ವಿಟ್ಟರ್) ಕಂಪನಿಗೆ ಸೇರುವ ಮೊದಲು ಟೆಕ್ ಸ್ಟಾರ್ಟ್ಅಪ್‌ಗಳೊಂದಿಗೆ ಕೆಲಸ ಮಾಡುವ ಮೂಲಕ ಸುಮಾರು ಒಂದು ದಶಕ ಕಳೆದಿದ್ದರು.

ಕಾರ್ಪೊರೇಟ್ ವಕೀಲೆಯಾದ ಗದ್ದೆ, ಕಂಪನಿಯಲ್ಲಿನೀತಿಗಳನ್ನು ರೂಪಿಸುವ ಕಾರ್ಯ ನಿರ್ವಹಿಸುತ್ತಾರೆ, ಕಳೆದ ಒಂದು ದಶಕದಲ್ಲಿ ಟ್ವಿಟರ್ ಅನ್ನು ರೂಪಿಸಲು ಅವರ ಪ್ರಭಾವವು ಕೆಲಸ ಮಾಡಿದೆ. ಜಾಗತಿಕ ರಾಜಕಾರಣದಲ್ಲಿ ಟ್ವಿಟರ್‌ನ ಪಾತ್ರವು ಹೆಚ್ಚಾಗುವುದರೊಂದಿಗೆ, ವಿಜಯಾ ಗದ್ದೆ ಅವರ ಗೋಚರತೆಯೂ ಹೆಚ್ಚಾಗಿದೆ.

ಫಾರ್ಚೂನ್‌ ವರದಿ ಪ್ರಕಾರ, ಟ್ವಿಟರ್ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಕ್ ಡೊರ್ಸೆ ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದಾಗ ವಿಜಯ ಓವಲ್ ಕಚೇರಿಯಲ್ಲಿದ್ದರು.. 2018 ರ ನವೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಡೊರ್ಸಿಯೊಂದಿಗೆ ವಿಜಯಾ ಸಹ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.