ADVERTISEMENT

ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅಭ್ಯರ್ಥಿ: ಭಾರತ ಮೂಲದ ಅಮೆರಿಕನ್ನರ ಸಂತಸ

ಪಿಟಿಐ
Published 13 ಆಗಸ್ಟ್ 2020, 5:55 IST
Last Updated 13 ಆಗಸ್ಟ್ 2020, 5:55 IST
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್   

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಆಗಿರುವುದು ಮುಸಲ್ಮಾನ ಮತ್ತು ಸಿಖ್ ಸಮುದಾಯದ ಭಾರತೀಯ ಮೂಲದ ಅಮೆರಿಕನ್ನರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಆಯ್ಕೆಯು ಅಮೆರಿಕದಲ್ಲಿ ಸಮುದಾಯದ ಒಟ್ಟು ಏಳಿಗೆಗೆ ಪೂರಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆಪಕ್ಷದ ಅಭ್ಯರ್ಥಿಯಾಗಿರುವ ಜೋ ಬಿಡೆನ್ ಅವರು ಮಂಗಳವಾರ ಭಾರತಿಯ ಮೂಲದ, ಸೆನೆಟರ್‌ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಘೋಷಿಸಿದ್ದರು. ಈ ನಿರ್ಧಾರವನ್ನು ಕಪ್ಪು ವರ್ಣೀಯ ಮತಗಳ ಕ್ರೋಡೀಕರಣ ಹಾಗೂ ಈ ಮೂಲಕ ಟ್ರಂಪ್ ಪರಾಭವಕ್ಕೆ ಕಾರಣವಾಗಲಿದೆ ಎಂದು ವ್ಯಾಖ್ಯಾನಿಸಲಾಗಿತ್ತು.

ಸದ್ಯ ಕ್ಯಾಲಿಫೋರ್ನಿಯಾ ಅನ್ನು ಪ್ರತಿನಿಧಿಸುತ್ತಿರುವ 55 ವರ್ಷದ ಕಮಲಾ ಅವರು, ಪ್ರಮುಖ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಮೂರನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಅಲಾಸ್ಕಾ ಗವರ್ನರ್ ಸಾರಾ ಪಾಲಿನ್ 2008ರಲ್ಲಿ ಹಾಗೂ ನ್ಯೂಯಾರ್ಕ್ ಪ್ರತಿನಿಧಿ ಗೆರಾಲ್ಡೈನ್ ಫೆರಾರೊ 1984ರಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.

ADVERTISEMENT

ಆಯ್ಕೆ ಕುರಿತು ಸಂತಸ ವ್ಯಕ್ತಪಡಿಸಿರುವ ಇಂಡಿಯನ್ ಮುಸ್ಲಿಮ್ಸ್ ಆಫ್ ಅಮೆರಿಕ (ಎಐಎಂ) ಕಮಲಾ ಅವರಿಗೆ ಅಭಿನಂದನೆ ಸಲ್ಲಿಸಿದೆ.

ಎಐಎಂನ ಕಾರ್ಯನಿರ್ವಾಹಕ ನಿರ್ದೇಶಕ ಕಲೀಂ ಖ್ವಾಜಾ ಅವರು, ಭಾರತೀಯ ಅಮೆರಿಕನ್ನರ ಎರಡನೇ ಪೀಳಿಗೆಯು ಉನ್ನತ ಸ್ಥಾನಕ್ಕೆ ಸ್ಪರ್ಧೆ ನಡೆಸುವ ಹಂತಕ್ಕೆ ಯಶಸ್ಸು ಸಾಧಿಸಿದೆ ಎಂದು ಹೇಳಿದ್ದಾರೆ. ಸಿಖ್ ಕೌನ್ಸಿಲ್‌ನ ಅಧ್ಯಕ್ಷ ಡಾ.ರಾಜವಂತ್ ಸಿಂಗ್, ಅಲ್ಪಸಂಖ್ಯಾತ ವರ್ಗದವರನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಪ್ರಮುಖ ಪಕ್ಷವೊಂದು ಮಹತ್ವದ ಹೆಜ್ಜೆಯಿಟ್ಟಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕಮಲಾ ತಂದೆ ಜಮೈಕಾ ಮತ್ತು ತಾಯಿ ಭಾರತ ಮೂಲದವರು. ತಾಯಿ ಕ್ಯಾನ್ಸರ್ ರೋಗ ತಜ್ಞೆ ಪ್ರೊ.ಶ್ಯಾಮಲಾ ಗೋಪಾಲನ್ ಮೂಲತಃ ಚೆನ್ನೈ ನಿವಾಸಿ. 1965ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.