ADVERTISEMENT

Consular Services: ಅಮೆರಿಕದಲ್ಲಿ ಭಾರತದ ಹೊಸ 8 ಕಾನ್ಸುಲರ್‌ ಕಚೇರಿಗಳ ಉದ್ಘಾಟನೆ

ಪಿಟಿಐ
Published 2 ಆಗಸ್ಟ್ 2025, 13:06 IST
Last Updated 2 ಆಗಸ್ಟ್ 2025, 13:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಅಮೆರಿಕದ ಎಂಟು ನಗರಗಳಲ್ಲಿ ಭಾರತವು ಹೊಸದಾಗಿ ಕಾನ್ಸುಲರ್‌ ಕಚೇರಿಗಳನ್ನು ಆರಂಭಿಸಿದೆ. ಇದರಿಂದ, ಇಲ್ಲಿರುವ ಭಾರತೀಯರಿಗೆ ವೀಸಾ, ಪಾಸ್‌ಪೋರ್ಟ್‌ ಸೇರಿದಂತೆ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯಲು ಸಹಾಯವಾಗಲಿದೆ.

ಬಾಸ್ಟನ್‌, ಕೊಲಂಬಸ್‌, ಡಲ್ಲಾಸ್‌, ಡೆಟ್ರಾಯ್ಟ್, ಎಡಿಸನ್‌, ಒರ್ಲಾಂಡೊ, ರಾಲಿ ಹಾಗೂ ಸ್ಯಾನ್‌ ಜೋಸ್‌ ನಗರದಲ್ಲಿ ಆರಂಭಗೊಂಡಿರುವ ಹೊಸ ಕಾನ್ಸುಲರ್‌ ಕಚೇರಿಗಳನ್ನು (ಐಸಿಎಸಿ) ಅಮೆರಿಕದ ಭಾರತೀಯ ರಾಯಭಾರಿ ವಿನಯ್‌ ಕ್ವಾತ್ರಾ ಅವರು ಶನಿವಾರ ವರ್ಚುವಲ್‌ ಆಗಿ ಉದ್ಘಾಟಿಸಿದರು. ಲಾಸ್‌ ಏಂಜಲೀಸ್‌ನಲ್ಲಿ ಸದ್ಯದಲ್ಲಿಯೇ ಮತ್ತೊಂದು ಕಚೇರಿ ಆರಂಭವಾಗಲಿದೆ.

ಆಗಸ್ಟ್‌ 1ರಿಂದಲೇ ಕಾನ್ಸುಲರ್‌ನಲ್ಲಿ ಪಾಸ್‌ಪೋರ್ಟ್, ವೀಸಾ, ಒಸಿಐ, ಶರಣಾಗತಿ ಪ್ರಮಾಣಪತ್ರ, ಜೀವಿತಾವಧಿ ಪ್ರಮಾಣಪತ್ರ, ಜನನ ಹಾಗೂ ವಿವಾಹ ಪ್ರಮಾಣಪತ್ರ, ಪೊಲೀಸ್‌ ಕ್ಲಿಯರೆನ್ಸ್‌ ಸೇರಿದಂತೆ ಇನ್ನಿತರ ಸೇವೆಗಳು ಆರಂಭಗೊಂಡಿವೆ. 

ADVERTISEMENT

ಐಸಿಎಸಿ ಕೇಂದ್ರಗಳ ವಿಸ್ತರಣೆಯಿಂದ ಅಮೆರಿಕದಲ್ಲಿ ಭಾರತವು 17 ಕಾನ್ಸುಲರ್‌ ಕೇಂದ್ರಗಳನ್ನು ಹೊಂದಿದಂತಾಗಿದೆ. ಇದರಿಂದ, ಭಾರತ ಹಾಗೂ ಅಮೆರಿಕದ ನಿವಾಸಿಗಳಿಗೆ ಕಾನ್ಸುಲರ್‌ ಸೇವೆಗಳು ಮತ್ತಷ್ಟು ಹತ್ತಿರವಾಗಿವೆ.

ಕಾನ್ಸುಲರ್‌ ಸೇವೆಗಳ ಮಹತ್ತರ ವಿಸ್ತರಣೆ ಎಂದು ಬಣ್ಣಿಸಿರುವ ಕ್ವಾತ್ರಾ, ಇಡೀ ಅಮೆರಿಕದಾದ್ಯಂತ ಭಾರತೀಯ ರಾಯಭಾರ ಕಚೇರಿಯು ತನ್ನ ಹೆಜ್ಜೆಗುರುತು ಮೂಡಿಸಿದೆ. ಇದರಿಂದ ಇಲ್ಲಿ ನೆಲಸಿರುವ ಸುಮಾರು 50 ಲಕ್ಷ ಭಾರತೀಯರಿಗೆ ಇನ್ನಷ್ಟು ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಎಲ್ಲ ಐಸಿಎಸಿ ಕೇಂದ್ರಗಳು ಶನಿವಾರ ಸೇರಿದಂತೆ ವಾರಕ್ಕೆ ಆರು ದಿನ ಕೆಲಸ ಮಾಡಲಿವೆ. ಇದರಿಂದ, ವಾರದ ದಿನಗಳಲ್ಲಿ ಕೆಲಸ ಅವಧಿಯ ಹೊರತಾಗಿಯೂ ಜನರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.