ADVERTISEMENT

‘ಡ್ರೈವ್‌–ಬೈ ವಿವಾಹ’: ಕಾರಿನಲ್ಲೇ ಕುಳಿತು ನವ ದಂಪತಿಗೆ ಶುಭ ಹಾರೈಸಿದ ಅತಿಥಿಗಳು

Indian couple in UAE hosts 'drive-by wedding ceremony' due to COVID-19

ಪಿಟಿಐ
Published 15 ನವೆಂಬರ್ 2020, 12:06 IST
Last Updated 15 ನವೆಂಬರ್ 2020, 12:06 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನೆಲೆಸಿರುವ ಕೇರಳದ ಜೋಡಿಯೊಂದು ಕೋವಿಡ್‌ ಹಿನ್ನೆಲೆಯಲ್ಲಿ ‘ಡ್ರೈವ್‌–ಬೈ ವಿವಾಹ’ ಕಾರ್ಯಕ್ರಮ ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಕಾರಿನಲ್ಲೇ ಕುಳಿತು ನವದಂಪತಿಗೆ ಶುಭ ಹಾರೈಸಿದ್ದಾರೆ.

ಮಹಮ್ಮದ್‌ ಜಝೀಮ್‌ ಮತ್ತು ಅಲಮಸ್‌ ಅಹಮದ್‌ ಅವರು ನವ ಜೀವನಕ್ಕೆ ಕಾಲಿಟ್ಟವರು ಎಂದು ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

‘ಮನೆಯ ಮುಂದೆ ಹೂವಿನಿಂದ ಅಲಂಕೃತಕೊಂಡಿದ್ದ ವೇದಿಕೆಯಲ್ಲಿ ನಾವು ನಿಂತಿದ್ದೆವು. ಕೋವಿಡ್‌ ಕಾರಣ ಅಂತರ ನಿಯಮ ಪಾಲಿಸುವುದು ನಮ್ಮ ಕರ್ತವ್ಯವಾಗಿತ್ತು. ಹೀಗಾಗಿಯೇ ಕಾರಿನಲ್ಲೇ ಕುಳಿತು ಹಾರೈಸುವಂತೆ ಅತಿಥಿಗಳಿಗೆ ಸೂಚಿಸಿದ್ದೆವು. ಬಂದವರೆಲ್ಲಾ ಕೆಲ ಕ್ಷಣ ಕಾರನ್ನು ನಿಲ್ಲಿಸಿ ಅಲ್ಲಿಂದಲೇ ಫೋಟೊ ಕ್ಲಿಕ್ಕಿಸಿಕೊಂಡು ಕೂಡಲೇ ತಮ್ಮ ಮನೆಗಳತ್ತ ಸಾಗಿದರು’ ಎಂದು ಜಝೀಮ್‌ ತಿಳಿಸಿದ್ದಾರೆ.

ADVERTISEMENT

ಯುಎಇಯಲ್ಲೇ ಹುಟ್ಟಿ ಬೆಳೆದ ಜಝೀಮ್,‌ ಎಮಿರೇಟ್ಸ್‌ ಏರ್‌ಲೈನ್‌ನಲ್ಲಿ ಎಂಜಿನಿಯರ್‌ ಆಗಿದ್ದಾರೆ. ಅಲಮಸ್‌ ಅವರು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ.

‘ನಮ್ಮ ಪಾಲಕರಿಗೆ ವಯಸ್ಸಾಗಿದೆ. ಕೊರೊನಾ ಸೋಂಕು ಕೂಡ ಪಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆಯಾದರೆ ಎಲ್ಲರಿಗೂ ತೊಂದರೆ. ಹೀಗಾಗಿಯೇ ‘ಡ್ರೈವ್‌–ಬೈ ವೆಡ್ಡಿಂಗ್‌’ ಆಯೋಜಿಸಿದ್ದೆವು. ಇಂಗ್ಲೆಂಡ್‌ನ ಜೋಡಿಯೊಂದು ಈ ರೀತಿಯ ವಿವಾಹ ಸಮಾರಂಭ ಹಮ್ಮಿಕೊಂಡಿತ್ತು. ಆ ಕಾರ್ಯಕ್ರಮವೇ ನಮಗೆ ಪ್ರೇರಣೆ’ ಎಂದು ಅಲಮಸ್‌ ಹೇಳಿದ್ದಾರೆ.

‘ನಾವು ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರಿಂದ ನಮಗೂ ಖುಷಿಯಾಗಿದೆ’ ಎಂದೂ ನವದಂಪತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.