ADVERTISEMENT

ಭಾರತದ ಆರ್ಥಿಕತೆ ಶೋಚನೀಯ: ಅಭಿಜಿತ್‌ ಬ್ಯಾನರ್ಜಿ

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಅಭಿಪ್ರಾಯ * ಬೇಡಿಕೆ ಕುಸಿತವೇ ದೊಡ್ಡ ಸಮಸ್ಯೆ

ಪಿಟಿಐ
Published 15 ಅಕ್ಟೋಬರ್ 2019, 20:22 IST
Last Updated 15 ಅಕ್ಟೋಬರ್ 2019, 20:22 IST
ಅಭಿಜಿತ್‌ ಬ್ಯಾನರ್ಜಿ
ಅಭಿಜಿತ್‌ ಬ್ಯಾನರ್ಜಿ   

ನ್ಯೂಯಾರ್ಕ್‌: ‘ಭಾರತದ ಆರ್ಥಿಕತೆಯು ತೀವ್ರ ಶೋಚನೀಯ ಸ್ಥಿತಿಯಲ್ಲಿದೆ. ಸರ್ಕಾರಕ್ಕೂ ಇತ್ತೀಚೆಗೆ ಅದು ಅನುಭವಕ್ಕೆ ಬರುತ್ತಿದೆ’ ಎಂದು 2019ನೇ ಸಾಲಿನ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಇಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ‘ನನ್ನ ಅಭಿಪ್ರಾಯದಲ್ಲಿ ಭಾರತದ ಆರ್ಥಿಕತೆಯು ಹದಗೆಟ್ಟ ಸ್ಥಿತಿಯಲ್ಲಿದೆ. ಹಿಮ್ಮುಖದ ಗಿರಕಿ ಹೊಡೆಯುತ್ತಿದೆ. ಹಣಕಾಸು ಸ್ಥಿರತೆ ಬಗ್ಗೆ ಹೆಚ್ಚು ಆತಂಕ ಪಡಬೇಕಾಗಿಲ್ಲ. ಆದರೆ, ಬೇಡಿಕೆ ಕುಸಿತವೇ ಅತಿದೊಡ್ಡ ಸಮಸ್ಯೆಯಾಗಿದೆ. ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂಬುದು ಈಗಿನ ಸ್ಥಿತಿಯೇ ಹೊರತು, ಮುಂದೇನಾಗಬಹುದು ಎಂಬುದರ ಬಗ್ಗೆ ನಾನು ನೀಡುತ್ತಿರುವ ಸೂಚನೆಯಲ್ಲ’ ಎಂದರು.

ಪ್ರತಿ ಒಂದೂವರೆ ವರ್ಷಕ್ಕೆ ಪ್ರಕಟವಾಗುವ ನಗರ ಮತ್ತು ಗ್ರಾಮೀಣ ಜನರ ಸರಾಸರಿ ಖರೀದಿ ಸಾಮರ್ಥ್ಯ ಕುರಿತ ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ‘ಇದು ಜನರ ಸರಕು ಮತ್ತು ಸೇವೆಗಳ ಸರಾಸರಿ ಬಳಕೆ ಪ್ರಮಾಣವನ್ನು ಅಂದಾಜಿಸುತ್ತಿದೆ. 2014–15 ಹಾಗೂ 2017–18ರಲ್ಲಿ ಈ ಸೂಚ್ಯಂಕ ಸ್ವಲ್ಪ ಇಳಿಕೆಯಾಗಿರುವುದು ಕಾಣಿಸುತ್ತಿದೆ. ಬಹಳ ವರ್ಷಗಳ ನಂತರ ಈ ಸ್ಥಿತಿ ಉಂಟಾಗಿದೆ. ಇದು ಅಪಾಯದ ಸ್ಪಷ್ಟ ಮುನ್ನೆಚ್ಚರಿಕೆಯಾಗಿದೆ’ ಎಂದರು.

ADVERTISEMENT

‘ಆರ್ಥಿಕತೆಯು ಕುಂಠಿತ ಬೆಳವಣಿಗೆ ಕಾಣುತ್ತಿರುವಾಗ ಯಾರೊಬ್ಬರೂ ವಿತ್ತೀಯ ಸ್ಥಿರತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ, ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಯೋಚನೆ ಮಾಡಬೇಕು. ಸದ್ಯದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿಸುವುದೇ ಸವಾಲಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಕ್ಕೆ ಅರ್ಥವಾಗುತ್ತಿದೆ’

‘ಯಾವ ಅಂಕಿ ಅಂಶಗಳನ್ನು ನಂಬಬೇಕು ಎಂಬುದರ ಬಗ್ಗೆ ಭಾರತದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ತನಗೆ ಅನುಕೂಲಕರವಲ್ಲದ ಅಂಕಿ ಅಂಶಗಳ ಬಗ್ಗೆ ಸರ್ಕಾರವು ಬೇರೆಯದೇ ಆದ ನಿಲುವನ್ನು ತಳೆದಿದೆ. ಇದು, ‘ಏನೋ ಸಮಸ್ಯೆ ಇದೆ’ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿದೆ ಎಂಬುದರ ಸೂಚನೆ ಎಂದೇ ನಾನು ಭಾವಿಸುತ್ತೇನೆ.

‘ಆರ್ಥಿಕ ಕುಂಠಿತದ ವೇಗ ಹೆಚ್ಚುತ್ತಲೇ ಇದೆ. ಪ್ರಗತಿಯ ಕುಸಿತದ ವೇಗ ಎಷ್ಟು ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ, ಅದು ಹೆಚ್ಚುತ್ತಿದೆ ಎಂಬುದಂತೂ ನಿಜ. ಇಂಥ ಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದನ್ನು ಖಚಿತವಾಗಿ ಹೇಳಲಾಗದು’ ಎಂದೂ ಬ್ಯಾನರ್ಜಿ ಹೇಳಿದ್ದಾರೆ.

**

ಕೇಂದ್ರ ಸರ್ಕಾರವು ವಿತ್ತೀಯ ಮತ್ತು ಹಣಕಾಸು ಕ್ರಮಗಳ ಮೂಲಕ ಓಲೈಸುವ ನಾಟಕ ಮಾಡುತ್ತಿದೆ
- ಅಭಿಜಿತ್‌ ಬ್ಯಾನರ್ಜಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.