ADVERTISEMENT

ಅಮೆರಿಕ: ಷಿಕಾಗೊದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ

ಪಿಟಿಐ
Published 7 ಫೆಬ್ರುವರಿ 2024, 5:28 IST
Last Updated 7 ಫೆಬ್ರುವರಿ 2024, 5:28 IST
   

ನ್ಯೂಯಾರ್ಕ್: ಭಾರತೀಯ ಮೂಲದ ಮಾಹಿತಿ ತಂತ್ರಜ್ಞಾನ ವಿದ್ಯಾರ್ಥಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಅಮೆರಿಕದ ಷಿಕಾಗೊ ನಗರದಲ್ಲಿ ನಡೆದಿದೆ. ಆ ಮೂಲಕ ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿ ನಡೆಯುತ್ತಿರುವ ದಾಳಿಯ ಸರಣಿ ಮುಂದುವರಿದಿದೆ.

ಸೈಯದ್‌ ಮಝಾಹಿರ್‌ ಅಲಿ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದ್ದು, ಫೆ.4ರಂದು ಮೂವರು ಆತನನ್ನು ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೊಂದು ವಿಡಿಯೊದಲ್ಲಿ ರಕ್ತದಲ್ಲಿ ತೊಯ್ದ ಮಝಾಹಿರ್‌ ಮುಖ ಹಾಗೂ ಬಟ್ಟೆಗಳನ್ನು ಕಾಣುತ್ತಿದೆ.

ಹೈದರಾಬಾದ್‌ ಮೂಲದ ಮುಝಾಹಿರ್‌ ಆರು ತಿಂಗಳ ಹಿಂದಷ್ಟೇ ವಿದ್ಯಾರ್ಜನೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಇಂಡಿಯಾನಾ ವೆಸ್ಲಿನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರು.

ADVERTISEMENT

ಕೈಯಲ್ಲಿ ಪೊಟ್ಟಣವೊಂದನ್ನು ಹಿಡಿದುಕೊಂಡು ಮನೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದ ಮುಝಾಹಿರ್‌ನನ್ನು ಮೂರು ಮಂದಿಯ ತಂಡವೊಂದು ಅಟ್ಟಾಡಿಸಿಕೊಂಡು ಹೋಗಿದೆ. ಈ ಪೈಕಿ ಒಬ್ಬ, ಮುಝಾಹಿರ್ ಹಣೆಗೆ ಪಿಸ್ತೂಲು ಮೂಲಕ ಗುರಿ ಇಟ್ಟಿದ್ದ ಎಂದು ABC7 ಸಂಸ್ಥೆ ವರದಿ ಮಾಡಿದೆ.

ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನನ್ನ ಕನಸನ್ನು ಈಡೇರಿಸಿಕೊಳ್ಳಲು ಅಮೆರಿಕವನ್ನು ಆಯ್ಕೆ ಮಾಡಿಕೊಂಡಿದ್ದೆ. ಆದರೆ ಈ ಘಟನೆ ನನಗೆ ಆಘಾತ ನೀಡಿದೆ. ಇದೊಂದು ಮರೆಯಲಾಗದ ಘಟನೆ’ ಎಂದು ಮುಝಾಹಿರ್‌ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾನೆ.

ಘಟನೆ ಸಂಬಂಧ ಯಾರ ಬಂಧನವೂ ಆಗಿಲ್ಲ.

ಮುಝಾಹಿರ್ ಹಾಗೂ ಅವರ ಪತ್ನಿ ಸೈದಾ ರುಖಿಯಾ ಫಾತಿಮಾ ರಝ್ವಿ ಜತೆ ಸಂಪರ್ಕದಲ್ಲಿರುವುದಾಗಿ ತಿಳಿಸಿರುವ ಷಿಕಾಗೊದ ರಾಯಭಾರ ಕಚೇರಿ, ಅಗತ್ಯ ಇರುವ ಎಲ್ಲಾ ಸಹಾಯ ನೀಡುವುದಾಗಿ ತಿಳಿಸಿದೆ. ಅಲ್ಲದೆ ತನಿಖೆ ನಡೆಸುತ್ತಿರುವ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿರುವುದಾಗಿ ತಿಳಿಸಿದೆ.

ಏತನ್ಮಧ್ಯೆ ಮೂವರು ಅಪ್ರಾಪ್ತ ಮಕ್ಕಳೊಂದಿಗೆ ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿಸಬೇಕು ಎಂದು ಕೋರಿ ಮುಝಾಹಿರ್‌ ಅವರ ಪತ್ನಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಸಂಪರ್ಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.