ADVERTISEMENT

ಮೆಕ್ಸಿಕೊ ರೆಸಾರ್ಟ್‌ನಲ್ಲಿ ಗುಂಡಿನ ಚಕಮಕಿ; ಭಾರತೀಯ ಮಹಿಳಾ ಟೆಕ್ಕಿ ಸಾವು

ಪಿಟಿಐ
Published 23 ಅಕ್ಟೋಬರ್ 2021, 9:44 IST
Last Updated 23 ಅಕ್ಟೋಬರ್ 2021, 9:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಸ್‌ಏಂಜಲಿಸ್‌: ಮೆಕ್ಸಿಕೊದ ರೆಸಾರ್ಟ್‌ವೊಂದರಲ್ಲಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಲಿಫೋರ್ನಿಯಾದ ಭಾರತೀಯ ಮೂಲದ ಮಹಿಳಾ ಟೆಕ್ಕಿ ಹಾಗೂ ಮತ್ತೊಬ್ಬ ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಂಜಲಿ ರ‍್ಯೋತ್‌(25) ಮೃತಪಟ್ಟ ಭಾರತೀಯ ಮೂಲದ ಟೆಕ್ಕಿ. ಮತ್ತೊಬ್ಬರು ಜರ್ಮನಿಯ ಪ್ರವಾಸಿಗರು. ಕೆರಿಬಿಯನ್ ಕರಾವಳಿಯ ಟುಲುಮ್‌ನಲ್ಲಿರುವ ರೆಸಾರ್ಟ್‌ನ ಲಾ ಮಾಲ್‌ಕ್ಯುರಿಡಾ ರೆಸ್ಟೊರೆಂಟ್‌ನಲ್ಲಿ ಎರಡು ಗುಂಪುಗಳ ನಡುವ ನಡೆದ ಗುಂಡಿನ ಚಕಮಕಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಕ್ಯಾಲಿಫೋರ್ನಿಯಾನ್ಯೂಸ್‌ಟೈಮ್ಸ್‌.ಕಾಮ್ ನ್ಯೂಸ್ ಫೋರ್ಟಲ್‌ ವರದಿ ಮಾಡಿದೆ.

ಅ. 22ರಂದು ಜನ್ಮದಿನ ಆಚರಿಸಿಕೊಳ್ಳಲು ಅಂಜಲಿ ರ‍್ಯೋತ್ ಸೋಮವಾರ ಈ ರೆಸಾರ್ಟ್‌ಗೆ ಬಂದಿದ್ದರು. ಬುಧವಾರ ರಾತ್ರಿ 10.30ರಲ್ಲಿ ಅಂಜಲಿ ಮತ್ತು ಇತರ ನಾಲ್ವರು ವಿದೇಶಿ ಪ್ರವಾಸಿಗರು ರೆಸ್ಟೊರೆಂಟ್‌ನ ಮಹಡಿಯಲ್ಲಿ ಊಟ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ನಾಲ್ವರು ಶಸ್ತ್ರಧಾರಿ ವ್ಯಕ್ತಿಗಳು, ಇವರ ಟೇಬಲ್‌ ಪಕ್ಕದಲ್ಲೇ ಕುಳಿತಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಗುರಿ ತಪ್ಪಿದ ಒಂದು ಗುಂಡು ಪಕ್ಕದಲ್ಲಿದ್ದ ವಿದೇಶಿ ಪ್ರವಾಸಿಗರಿಗೆ ಹೊಡೆದಿದೆ. ಪರಿಣಾಮವಾಗಿ ಅಂಜಲಿ ಮತ್ತು ಜರ್ಮನಿಯ ಪ್ರವಾಸಿಯೊಬ್ಬರು ಮೃತಪಟ್ಟು, ಮೂವರಿಗೆ ಗಾಯಗಳಾಗಿವೆ ಎಂದು ಸ್ಪಾನಿಷ್ ಪತ್ರಿಕೆ ‘ಇಐ ಪೈಸ್‌‘ ವರದಿ ಮಾಡಿದೆ.

ADVERTISEMENT

ರ‍್ಯೋತ್‌ ಅವರ ಇನ್‌ಸ್ಟಾಗ್ರಾಂ ಖಾತೆಯ ಮಾಹಿತಿ ಪಕ್ರಾರ, ಪ್ರವಾಸಿ ಬ್ಲಾಗರ್‌ ಆಗಿರುವ ಅಂಜಲಿ, ಭಾರತದ ಹಿಮಾಚಲ ಪ್ರದೇಶವರು. ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋಸ್‌ನಲ್ಲಿ ನೆಲೆಸಿದ್ದಾರೆ. ಕಳೆದ ಜುಲೈನಿಂದ ‘ಲಿಂಕ್ಡ್‌ಇನ್‌‘ ಕಂಪನಿಯಲ್ಲಿ ಸೀನಿಯರ್ ಸೈಟ್ ರಿಲಿಯಬಲಿಟಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮುನ್ನ ಅವರು ಯಾಹೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನ್ಯೂಸ್‌ ಪೋರ್ಟ್‌ಲ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.