ಗುಂಡಿನ ದಾಳಿ (ಸಾಂದರ್ಭಿಕ ಚಿತ್ರ)
ನ್ಯೂಯಾರ್ಕ್: ಕೆನಡಾದ ಒಂಟಾರಿಯೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಅಪರಿಚಿತರ ನಡುವೆ ನಡೆದ ಗುಂಡಿನ ದಾಳಿಯ ವೇಳೆ ಅಕಸ್ಮಾತಾಗಿ ಗುಂಡು ತಗುಲಿ, ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವ (21) ಮೃತಪಟ್ಟಿದ್ದಾರೆ. ಒಂಟಾರಿಯೊದ ಹ್ಯಾಮಿಲ್ಟನ್ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ಅವರು ಅಧ್ಯಯನ ನಡೆಸುತ್ತಿದ್ದರು. ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
'ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವ ಅವರ ಸಾವಿನಿಂದ ನಾವು ಬಹಳ ದುಃಖಿತರಾಗಿದ್ದೇವೆ' ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಶುಕ್ರವಾರ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಗುಂಡಿನ ದಾಳಿ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿನಿ ಅಮಾಯಕಳಾಗಿದ್ದಾಳೆ. ಎರಡು ವಾಹನಗಳ ಸವಾರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಅವರು ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿ ಸಾವು ಹಾಗೂ ಗುಂಡಿನ ದಾಳಿಯ ಸಂಬಂಧ ತನಿಖೆ ನಡೆಸಲಾಗುತ್ತಿದೆ' ಎಂದು ಹ್ಯಾಮಿಲ್ಟನ್ ಪೊಲೀಸರು ಹೇಳಿದ್ದಾರೆ.
'ನಾವು ವಿಧ್ಯಾರ್ಥಿನಿಯ ಕುಟುಂಬದವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವುದು. ಈ ಕಷ್ಟದ ಸಮಯದಲ್ಲಿ ಅವರ ಜೊತೆಗೆ ನಾವಿದ್ದೇವೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಥಳೀಯ ಕಾಲಮಾನ ಸಂಜೆ 7.30ರ ಸುಮಾರಿಗೆ ಹ್ಯಾಮಿಲ್ಟನ್‌ನ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರಸ್ತೆಯ ಬಳಿ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಯಿತು. ತಕ್ಷಣ ಸ್ಥಳಕ್ಕೆ ತೆರಳಿದೆವು. ಅಲ್ಲಿ ರಾಂಧವಾ ಅವರ ಎದೆಗೆ ಗುಂಡು ತಗುಲಿರುವುದು ಕಂಡುಬಂತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಹ್ಯಾಮಿಲ್ಟನ್ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಕಪ್ಪು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಬಿಳಿ ಸೆಡಾನ್ ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಸಮೀಪದ ಕೆಲವು ಮನೆಗಳ ಕಿಟಕಿಗಳಿಗೆ ಗುಂಡು ತಗುಲಿವೆ. ಅದೃಷ್ಟವಶಾತ್ ಮನೆಯಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.