ಶಿವಾಂಕ್ ಅವಸ್ಥಿ
ಟೊರಂಟೊ (ಕೆನಡಾ): ಟೊರಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆಯಾದವರು. ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುವ ಮೊದಲೇ ಆರೋಪಿಗಳು ಪರಾರಿಯಾಗಿದ್ದಾರೆ.
‘ಮಂಗಳವಾರ ಮಧ್ಯಾಹ್ನ 3:34 ರ ಸುಮಾರಿಗೆ ಸ್ಥಳೀಯರೊಬ್ಬರು ಕರೆ ಮಾಡಿ ಹೈಲ್ಯಾಂಡ್ ಕ್ರೀಕ್ ಟ್ರಯಲ್ ಮತ್ತು ಓಲ್ಡ್ ಕಿಂಗ್‌ಸ್ಟನ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲಿಗೆ ತೆರಳಿದ ಪೊಲೀಸರು ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು’ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
‘ಪೊಲೀಸರು ಅಲ್ಲಿಗೆ ತೆರಳುವ ಮೊದಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ತಿಳಿಸಿದೆ. ಅಲ್ಲದೇ ಆರೋಪಿಗಳ ಪತ್ತೆಗೆ ಸಹಾಯ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಏತನ್ಮಧ್ಯೆ, ಶಿವಾಂಕ್ ಅವಸ್ಥಿ ಹತ್ಯೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.
‘ಶಿವಾಂಕ್ ಅವಸ್ಥಿ ಅವರ ದುರಂತ ಸಾವಿನ ಬಗ್ಗೆ ನಾವು ತೀವ್ರ ದುಃಖ ವ್ಯಕ್ತಪಡಿಸುತ್ತೇವೆ’ ಎಂದು ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎಕ್ಸ್‌ನಲ್ಲಿ ತಿಳಿಸಿದೆ.
‘ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೇವೆ’ ಎಂದು ತಿಳಿಸಿದೆ.
ಕಳೆದ ವಾರ ಟೊರಂಟೊದಲ್ಲಿ ಭಾರತದ ಮಹಿಳೆ ಹಿಮಾಂಶಿ ಖುರಾನಾ ಹತ್ಯೆಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.