ಹಾರ್ವರ್ಡ್ ವಿಶ್ವವಿದ್ಯಾಲಯ
ನ್ಯೂಯಾರ್ಕ್: ಹಾರ್ವರ್ಡ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳು ಉದ್ಯೋಗದ ಅಭಾವ ಎದುರಿಸುತ್ತಿದ್ದಾರೆ.
ವಿಶ್ವವಿದ್ಯಾಲಯದ ವಿರುದ್ಧ ಡೊನಾಲ್ಡ್ ಟ್ರಂಪ್ ಆಡಳಿತವು ಹಲವು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಿಶ್ಚಿತತೆ ಹಾಗೂ ಆತಂಕದ ಜೊತೆಗೆ ಏಳುಬೀಳಿನ ಹಾದಿಯಲ್ಲಿದ್ದಾರೆ.
‘ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಲ್ಲಿಯೇ ಇದ್ದು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕೋ ಅಥವಾ ಸ್ವದೇಶಕ್ಕೆ ಮರಳಬೇಕೋ ಎಂಬುದೇ ತಿಳಿಯದಂತಾಗಿದೆ’ ಎಂದು ಕಳೆದ ತಿಂಗಳಷ್ಟೇ ಹಾರ್ವರ್ಡ್‌ನ ಕೆನಡಿ ಸ್ಕೂಲ್‌ನಿಂದ ಪದವಿ ಪಡೆದಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ತಮ್ಮ ಆತಂಕ ವ್ಯಕ್ತಪಡಿಸಿದರು.
‘ಅಮೆರಿಕದಲ್ಲಿ ಅಧ್ಯಯನ ಮಾಡಿದ ಬಳಿಕ, ಕೆಲ ವರ್ಷ ಇಲ್ಲಿಯೇ ಕೆಲಸ ಮಾಡುವ ಕನಸಿನೊಂದಿಗೆ ಬಹುತೇಕ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದರೆ, ಇದೀಗ ಆ ಚಿತ್ರಣವೇ ಬದಲಾಗಿದೆ’ ಎಂದು ಹಾರ್ವರ್ಡ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಡಿಸೈನ್‌ನಿಂದ ಎರಡು ವರ್ಷದ ಕೋರ್ಸ್ ಮುಗಿಸಿರುವ ಮತ್ತೊಬ್ಬ ವಿದ್ಯಾರ್ಥಿ ತಿಳಿಸಿದರು.
‘ನಮ್ಮಲ್ಲಿರುವ ವೀಸಾದಡಿ ಅಮೆರಿಕದಲ್ಲಿ ಇದೀಗ ಕೆಲಸ ಪಡೆಯುವುದೇ ಕಷ್ಟವಾಗಿದೆ. ಉದ್ಯೋಗದಾತರು ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.
‘ಹಾರ್ವರ್ಡ್ ವಿಶ್ವವಿದ್ಯಾಲಯವು ಅಮೆರಿಕ ವಿರೋಧಿ. ಭಯೋತ್ಪಾದಕರ ಪರ ಚಳವಳಿಗಾರರಿಗೆ ತನ್ನ ಕ್ಯಾಂಪಸ್‌ನಲ್ಲಿ ಅವಕಾಶ ನೀಡಿದೆ. ಅಸುರಕ್ಷಿತ ವಾತಾವರಣ ಅಲ್ಲಿರುವುದರಿಂದ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (ಡಿಎಚ್‌ಎಸ್) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.