ADVERTISEMENT

ಬಹುಕೋಟಿ ವಂಚನೆ ಆರೋಪಿ ನೀರವ್‌ ಮೋದಿ ಲಂಡನ್‌ನಲ್ಲಿ ವಾಸ: ಟೆಲಿಗ್ರಾಫ್ ವರದಿ

ಏಜೆನ್ಸೀಸ್
Published 9 ಮಾರ್ಚ್ 2019, 18:28 IST
Last Updated 9 ಮಾರ್ಚ್ 2019, 18:28 IST
ಲಂಡನ್‌ನಲ್ಲಿ ನೀವರ್‌ ಮೋದಿ. ಚಿತ್ರ: ಟೆಲಿಗ್ರಾಪ್‌ ಟ್ವೀಟ್‌
ಲಂಡನ್‌ನಲ್ಲಿ ನೀವರ್‌ ಮೋದಿ. ಚಿತ್ರ: ಟೆಲಿಗ್ರಾಪ್‌ ಟ್ವೀಟ್‌   

ಲಂಡನ್‌:ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಬಹುಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ, ಲಂಡನ್‌ನ ಪ್ರತಿಷ್ಠಿತ ವೆಸ್ಟ್‌ಎಂಡ್‌ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಡಂಬರದ ಜೀವನ ನಡೆಸುತ್ತಿದ್ದಾರೆಎಂದು ದಿ ಟೆಲಿಗ್ರಾಫ್‌ ಪತ್ರಿಕೆ ವಿಶೇಷವರದಿ ಮಾಡಿದೆ.

48 ವರ್ಷದ ಮೋದಿ, ಲಂಡನ್‌ನಲ್ಲಿಮೂರು ಬೆಡ್‌ರೂಂಗಳ ಫ್ಲ್ಯಾಟ್‌ ಒಂದರಲ್ಲಿ ವಾಸವಾಗಿದ್ದು, ಅದರ ತಿಂಗಳ ವೆಚ್ಚ 17 ಸಾವಿರ ಪೌಂಡ್‌ಗಳಷ್ಟಾಗಲಿದೆ (ಅಂದಾಜು ₹ 15.64 ಲಕ್ಷ).ತಕ್ಷಣಕ್ಕೆ ಗುರುತು ಸಿಗದಂತೆ ದಪ್ಪದಾಗಿ ಮೀಸೆ ಮತ್ತು ಕುರುಚಲು ಗಡ್ಡ ಬಿಟ್ಟಿರುವ ಮೋದಿ, 10 ಸಾವಿರ ಪೌಂಡ್‌ಗಳಷ್ಟು (₹ 9.20 ಲಕ್ಷ) ದುಬಾರಿಯ ಆಸ್ಟ್ರಿಚ್‌ ಹೈಡ್‌ ಜಾಕೆಟ್‌ ಧರಿಸಿರುವ ವಿಡಿಯೊ ತುಣುಕೊಂದನ್ನು ಸಹ ಪತ್ರಿಕೆ ತನ್ನ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಲಂಡನ್‌ನಲ್ಲಿ ನೀರವ್‌ ಮೋದಿ ಹೊಸ ವಜ್ರದ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ವಾಚ್‌ಗಳು ಮತ್ತು ಚಿನ್ನಾಭರಣಗಳ ಸಗಟು ವ್ಯಾಪಾರಿ ಹಾಗೂ ವಿಶೇಷ ಮಳಿಗೆಗಳಲ್ಲಿ ವಾಚುಗಳು ಮತ್ತು ಚಿನ್ನಾಭರಣಗಳ ಚಿಲ್ಲರೆ ವ್ಯಾಪಾರಿ ಎಂದುಇಂಗ್ಲೆಂಡ್‌ನ ಕಂಪನೀಸ್‌ ಹೌಸ್‌ನಲ್ಲಿ ನೋಂದಣಿಯಾಗಿದೆ. ಆದರೆ ಈ ಹೊಸ ಉದ್ಯಮದ ನಿರ್ದೇಶಕರ ಪಟ್ಟಿಯಲ್ಲಿ ಮೋದಿ ಹೆಸರಿಲ್ಲ ಎಂದು ತಿಳಿಸಿದೆ.

ADVERTISEMENT

ಲಂಡನ್‌ನಲ್ಲಿ ವಾಸವಿರಲು ಅಲ್ಲಿನ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಾಗಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ‘ಸಾರಿ, ನೋ ಕಮೆಂಟ್ಸ್‌’ ಎಂದಷ್ಟೇ ನೀರವ್‌ ಪ್ರತಿಕ್ರಿಯೆ ನೀಡಿದ್ದಾರೆ.

ಡಿಪಾರ್ಟ್‌ಮೆಂಟ್‌ ಫಾರ್‌ ವರ್ಕ್‌ ಆ್ಯಂಡ್‌ ಪೆನ್ಶನ್‌ನಿಂದಮೋದಿಗೆ ನ್ಯಾಷನಲ್‌ ಇನ್ಶೂರೆನ್ಸ್‌ ಸಂಖ್ಯೆ ನೀಡಲಾಗಿದೆ. ಅಲ್ಲದೆ ಬ್ರಿಟಿಷ್‌ ಬ್ಯಾಂಕ್‌ ಖಾತೆಯನ್ನೂ ಬಳಸುತ್ತಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ಬ್ರಿಟನ್‌ನಲ್ಲಿ ಕೆಲಸ ಮಾಡಲು ಅನುಮತಿ ದೊರೆತಿದೆ ಎಂದೇ ಅರ್ಥ ಎಂದುಮೂಲಗಳು ‘ಟೆಲಿಗ್ರಾಫ್‌’ಗೆ ತಿಳಿಸಿವೆ.

‘ಬ್ರಿಟನ್‌ನಲ್ಲಿರುವುದು ಗೊತ್ತಿದೆ’

‘ನೀರವ್‌ ಲಂಡನ್‌ನಲ್ಲಿ ಇರುವುದು ಸರ್ಕಾರಕ್ಕೆ ಗೊತ್ತಿದೆ’ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

‘ಅಲ್ಲಿ ಕಾಣಿಸಿಕೊಂಡಿದ್ದಾರೆ ಎಂದಾಕ್ಷಣ ಭಾರತಕ್ಕೆ ಕರೆತರಲಾಗುವುದು ಎಂದು ಹೇಳಲು ಬರುವುದಿಲ್ಲ. ಅವರನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಎಲ್ಲ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಭಾರತ ವಶಕ್ಕೆ ನೀಡುವ ಬಗ್ಗೆ ಇಂಗ್ಲೆಂಡ್‌ನ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.