ಭಾರತ–ಚೀನಾ
ಬೀಜಿಂಗ್: ಭಾರತೀಯ ವಾಯುಪಡೆಯ ‘ಸಮಗ್ರ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ’ಯ (ಐಎಡಿಡಬ್ಲ್ಯುಎಸ್), ಅದರಲ್ಲೂ ಮುಖ್ಯವಾಗಿ ಲೇಸರ್ ನಿರ್ದೇಶಿತ ಅಧಿಕ ಶಕ್ತಿ ಹೊಂದಿರುವ ಅಸ್ತ್ರಗಳ (ಡಿಇಡಬ್ಲ್ಯು) ಯಶಸ್ವಿ ಪರೀಕ್ಷಾರ್ಥ ಪ್ರಯೋಗವು ಚೀನಾ ಮಿಲಿಟರಿ ಕ್ಷೇತ್ರದ ತಜ್ಞರ ಪ್ರಶಂಸೆ ಗಳಿಸಿದೆ.
ಭಾರತದ ಸಾಧನೆಯನ್ನು ‘ಮಹತ್ವದ ಪ್ರಗತಿ’ ಎಂದು ಬೀಜಿಂಗ್ ಮೂಲದ ‘ಏರೋಸ್ಪೇಸ್ ನಾಲೇಜ್’ ನಿಯತಕಾಲಿಕೆಯ ಪ್ರಧಾನ ಸಂಪಾದಕ ವಾಂಗ್ ಯನಾನ್ ಬಣ್ಣಿಸಿದ್ದಾರೆ.
ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಬಹು ಹಂತದ ವಾಯುಪ್ರದೇಶ ರಕ್ಷಣಾ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವು ಒಡಿಶಾ ಕರಾವಳಿಯಲ್ಲಿ ಶನಿವಾರ ಯಶಸ್ವಿಯಾಗಿ ನಡೆದಿತ್ತು.
ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಜರ್ಮನಿ ಮತ್ತು ಇಸ್ರೇಲ್ ಮುಂತಾದ ಕೆಲವೇ ದೇಶಗಳ ಬಳಿಯಿರುವ ಡಿಇಡಬ್ಲ್ಯು ವ್ಯವಸ್ಥೆಯನ್ನು ಭಾರತವು ಅಭಿವೃದ್ಧಿಪಡಿಸಿರುವುದು ಚೀನಾದ ಗಮನ ಸೆಳೆದಿದೆ.
‘ಐಎಡಿಡಬ್ಲ್ಯುಎಸ್, ಮೂರು ಹಂತದ ವಾಯು ರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಿದೆ. ಅದರಲ್ಲಿರುವ ಲೇಸರ್ ಆಧಾರಿತ ರಕ್ಷಣಾ ವ್ಯವಸ್ಥೆಯನ್ನು ನಿಜವಾಗಿಯೂ ಗಮನಾರ್ಹ ಪ್ರಗತಿ ಎಂದೇ ಪರಿಗಣಿಸಬೇಕು. ವಿಶ್ವದ ಕೆಲವೇ ದೇಶಗಳು ಈ ವ್ಯವಸ್ಥೆಯನ್ನು ತಮ್ಮ ಸೇನೆಯಲ್ಲಿ ನಿಯೋಜಿಸಿವೆ’ ಎಂದು ವಾಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.