
ಬೆಂಕಿಗೆ ಆಹುತಿಯಾದ ಕಟ್ಟಡ
ಜಕಾರ್ತ: ಇಂಡೊನೇಷ್ಯಾದ ರಾಜಧಾನಿ ಜಕಾರ್ತದ ಕಟ್ಟಡವೊಂದರಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಸೇರಿದಂತೆ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
15 ಮಹಿಳೆಯರು, ಏಳು ಪುರುಷರ ಶವ ದೊರೆತಿವೆ.
ಮಧ್ಯಾಹ್ನದ ವೇಳೆ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ ಎಲ್ಲ ಮಹಡಿಗಳಿಗೆ ಹಬ್ಬಿತು ಎಂದು ಸೆಂಟ್ರಲ್ ಜಕಾರ್ತ ಪೊಲೀಸ್ ಮುಖ್ಯಸ್ಥ ಕಾಂಡ್ರೊ ತಿಳಿಸಿದ್ದಾರೆ.
ಏಳು ಅಂತಸ್ತಿನ ಕಟ್ಟಡವೊಂದು ಬೆಂಕಿಯ ಜ್ವಾಲೆಯಿಂದ ಧಗಧಗಿಸಿತು. ಇದು ನೆರೆಹೊರೆಯ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿತ್ತು ಎಂದಿದ್ದಾರೆ.
ನೂರಕ್ಕೂ ಹೆಚ್ಚು ಸಿಬ್ಬಂದಿಯು 29 ಅಗ್ನಿಶಾಮಕ ವಾಹನಗಳೊಂದಿಗೆ ಮೂರು ತಾಸಿಗೂ ಹೆಚ್ಚಿನ ಅವಧಿ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಗೊತ್ತಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.