ಭಾರತ -ಪಾಕ್ ಧ್ವಜ
ಲಂಡನ್: ಈಚೆಗಿನ ಮಿಲಿಟರಿ ಸಂಘರ್ಷದ ಬಳಿಕ ಹದಗೆಟ್ಟಿರುವ ಭಾರತ–ಪಾಕಿಸ್ತಾನ ನಡುವಿನ ಸಂಬಂಧ ಯಥಾಸ್ಥಿತಿಗೆ ಬರಬೇಕಾದರೆ ಉಭಯ ದೇಶಗಳ ಪ್ರತಿನಿಧಿಗಳು ಮೂರನೇ ರಾಷ್ಟ್ರವೊಂದರಲ್ಲಿ ಅನೌಪಚಾರಿಕ ಮಾತುಕತೆ ಆರಂಭಿಸುವುದು ಅಗತ್ಯ ಎಂದು ಬ್ರಿಟನ್‌ನ ಯುದ್ಧತಂತ್ರ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಲಂಡನ್ ಮೂಲದ ಚಿಂತಕರ ಚಾವಡಿ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಟಿಜಿಕ್ ಸ್ಟಡೀಸ್ (ಐಐಎಸ್ಎಸ್), ಕಳೆದ ವಾರ ‘ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷ ಮತ್ತು ಪ್ರಾದೇಶಿಕ ಸ್ಥಿರತೆ ಹಾಗೂ ಭದ್ರತೆಯ ನಿರೀಕ್ಷೆಗಳು' ಎಂಬ ವಿಷಯದಲ್ಲಿ ನಡೆಸಿದ ಅಧಿವೇಶನದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
‘ಭಾರತ ಮತ್ತು ಪಾಕಿಸ್ತಾನ ನಡುವಿನ 100 ಗಂಟೆಗಳ ಮಿಲಿಟರಿ ಸಂಘರ್ಷದ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳು ಮತ್ತು ವಿವಾದಾತ್ಮಕ ಸಂಕಥನಗಳು ಕೇಳಿಬಂದಿವೆ’ ಎಂದು ಐಐಎಸ್‌ಎಸ್‌ನ ಹಿರಿಯ ಸದಸ್ಯ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ಕಾರ್ಯಕ್ರಮದ ಮುಖ್ಯಸ್ಥ ರಾಹುಲ್ ರಾಯ್ ಚೌಧರಿ ಹೇಳಿದ್ದಾರೆ.
‘ತನ್ನ ವಿರುದ್ದದ ಎಲ್ಲ ರೀತಿಯ ಭಯೋತ್ಪಾದಕ ದಾಳಿಗಳು ಕೊನೆಗೊಳ್ಳುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದಿರಲು ಮತ್ತು ವ್ಯಾಪಾರ ಸಂಬಂಧ ಮರುಸ್ಥಾಪಿಸದಿರಲು ಭಾರತ ನಿರ್ಧರಿಸಿದೆ’ ಎಂದಿದ್ದಾರೆ.
‘ಅದೇ ರೀತಿ, ಪಾಕಿಸ್ತಾನದೊಂದಿಗೆ ಭವಿಷ್ಯದಲ್ಲಿ ಯಾವುದೇ ಮಾತುಕತೆ ನಡೆಸುವುದಾದರೆ ಅದು ಭಯೋತ್ಪಾದನೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವಿಷಯದ ಬಗ್ಗೆ ಮಾತ್ರ ಎಂದು ಭಾರತ ಹೇಳಿದೆ’ ಎಂಬುದನ್ನೂ ಅವರು ಒತ್ತಿಹೇಳಿದ್ದಾರೆ.
‘ಮಾತುಕತೆಗೆ ಮುನ್ನವೇ ಭಾರತವು ಮುಂದಿಟ್ಟಿರುವ ಇಂತಹ ಷರತ್ತುಗಳನ್ನು ಪಾಕಿಸ್ತಾನವು ಪ್ರಶ್ನಿಸುವ ಸಾಧ್ಯತೆಯಿದೆ ಮತ್ತು ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶವನ್ನು ಬಯಸುತ್ತಿದೆ’ ಎಂದು ತಿಳಿಸಿದ್ದಾರೆ.
‘ಪ್ರಸಕ್ತ ಪರಿಸ್ಥಿತಿಯಲ್ಲಿ, ಉಭಯ ದೇಶಗಳ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರು ಮೂರನೇ ರಾಷ್ಟ್ರದಲ್ಲಿ ಖಾಸಗಿ ಹಾಗೂ ಅನೌಪಚಾರಿಕ ಸಂವಾದ ನಡೆಸುವುದು ಪ್ರಾದೇಶಿಕ ಸ್ಥಿರತೆ ಸ್ಥಾಪನೆಗೆ ಬೇಕಾದ ತಕ್ಷಣದ ಪರಿಹಾರ ಮಾರ್ಗ ಆಗಿದೆ’ ಎಂದು ಅವರು ಹೇಳಿದ್ದಾರೆ.
ಮಿಲಿಟರಿ ಸಂಘರ್ಷದ ವೇಳೆ ಭಾರತದ ಸೇನೆ ಬಳಸಿದ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಆಂಟೋನಿ ಲೆವೆಸ್‌ಕ್ಯೂಸ್, ‘ಭಾರತವು ‘ಮೇಕ್ ಇನ್ ಇಂಡಿಯಾ’ದ ಯಶಸ್ಸಿನ ಬಗ್ಗೆ ಸಾಕಷ್ಟು ಹೇಳಿಕೆಗಳನ್ನು ಕೊಟ್ಟಿದೆ. ಸ್ವದೇಶಿ ನಿರ್ಮಿತ ಮಿಲಿಟರಿ ಉಪಕರಣಗಳ ಯಶಸ್ವಿ ಬಳಕೆಯ ದೊಡ್ಡ ಪ್ರಚಾರವನ್ನೇ ಮಾಡಿದೆ. ರಕ್ಷಣಾ ಸಾಮಗ್ರಿಗಳ ಪೂರೈಕೆದಾರನಾಗಿ ತನ್ನ ಸಾಮರ್ಥ್ಯವನ್ನು ತೋರಿಸುವ ಅವಕಾಶ ಭಾರತಕ್ಕೆ ಲಭಿಸಿತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.