ADVERTISEMENT

ಪಾಕ್‌ ಮಾಜಿ ರಾಯಭಾರಿ ಬಂಧಿಸಲು ಇಂಟರ್‌ಪೋಲ್‌ ನಿರಾಕರಣೆ

ಪಿಟಿಐ
Published 2 ಜನವರಿ 2019, 16:26 IST
Last Updated 2 ಜನವರಿ 2019, 16:26 IST
ಹುಸೈನ್‌ ಹಖ್ಖಾನಿ
ಹುಸೈನ್‌ ಹಖ್ಖಾನಿ   

ವಾಷಿಂಗ್ಟನ್‌ :ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿದ್ದ ಹುಸೈನ್‌ ಹಖ್ಖಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಪಾಕಿಸ್ತಾನ ಮಾಡಿರುವ ಬೇಡಿಕೆಯನ್ನು ಇಂಟರ್‌ಪೋಲ್‌ ಮತ್ತೊಮ್ಮೆ ತಿರಸ್ಕರಿಸಿದೆ.

ರಾಜದ್ರೋಹದ ಮತ್ತು ಹಣದ ದುರುಪಯೋಗದ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಖ್ಖಾನಿ ಅವರನ್ನು ವಿಚಾರಣೆಗೆ ಒಳಪಡಿಸಲು ಪಾಕಿಸ್ತಾನದ ಸುಪ್ರೀಂಕೋರ್ಟ್‌ ಬಯಸಿದೆ.

ಪಾಕಿಸ್ತಾನದ ಮಿಲಿಟರಿಯ ಪ್ರಬಲ ಟೀಕಕಾರರಾದ ಹಖ್ಖಾನಿಯ ವಿರುದ್ಧ ಕಳೆದ ಜನವರಿಯಲ್ಲಿ ಬಂಧನ ವಾರಂಟ್‌ ಹೊರಡಿಸಿದ್ದ ಪಾಕ್ ಸುಪ್ರೀಂಕೋರ್ಟ್‌, ಹಖ್ಖಾನಿ ಬಂಧಿಸಿ ಹಾಜರುಪಡಿಸುವಂತೆ ಅಮೆರಿಕದ ತನಿಖಾ ಸಂಸ್ಥೆಗೂ (ಎಫ್‌ಐಎ) ನೋಟಿಸ್‌ ನೀಡಿತ್ತು. ಕಳೆದ ಏಪ್ರಿಲ್‌ನಲ್ಲೇ ಪಾಕ್‌ನ ಪದಚ್ಯುತ‌ ಮಾಜಿ ರಾಯಭಾರಿ ಬಂಧಿಸಲು ಇಂಟರ್‌ಪೋಲ್‌ ನಿರಾಕರಿಸಿತ್ತು. ಈಗ ಪಾಕ್‌ ಅಧಿಕಾರಿಗಳು ಬಂಧಿಸಿ, ಹಸ್ತಾಂತರಿಸುವಂತೆ ಮತ್ತೊಮ್ಮೆ ಮಾಡಿರುವ ಮನವಿಯನ್ನು ಇಂಟರ್‌ಪೋಲ್‌ ತಿರಸ್ಕರಿಸಿದೆ.

ADVERTISEMENT

ಹಖ್ಖಾನಿಯವರು ರಾಯಭಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಳು ವರ್ಷಗಳ ನಂತರಮತ್ತು ಅವರು ರಾಜಕೀಯಆರೋಪಗಳನ್ನುತಳ್ಳಿ ಹಾಕಿದ ನಂತರ ಪಾಕಿಸ್ತಾನದ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿದೆ. ಇದರಲ್ಲಿ ರಾಜಕೀಯ ಉದ್ದೇಶವಿರುವುದು ಪ್ರತಿಬಿಂಬಿತವಾಗುತ್ತಿದೆ ಎಂದು ಇಂಟರ್‌ಪೋಲ್‌ ಹೇಳಿದೆ.

ಹಖ್ಖಾನಿ ಬಂಧಿಸಿ ಗಡಿಪಾರು ಮಾಡುವಂತೆ ಇಟ್ಟಿದ್ದ ಕೋರಿಕೆಯನ್ನು ಇಂಟರ್‌ಪೋಲ್‌ ಎರಡನೇ ಬಾರಿಗೆ ತಿರಸ್ಕರಿಸಿರುವುದರಿಂದ ‍ಪಾಕ್‌ ಸರ್ಕಾರ, ಇದನ್ನು ಅಮೆರಿಕದ ವಿದೇಶಾಂಗ ಸಚಿವಾಲಯದ ಎದುರು ಪ್ರಶ್ನಿಸಲು ತೀರ್ಮಾನಿಸಿದೆ.

ಪಾಕ್‌ ಅಧಿಕಾರಿಗಳು ಅಮೆರಿಕದ ಅಧಿಕಾರಿಗಳನ್ನು ಈ ಸಂಬಂಧ ಇದುವರೆಗೆ ನೇರವಾಗಿ ಸಂಪರ್ಕಿಸಿಲ್ಲ. ಅಲ್ಲದೆ, ಮಾಜಿ ರಾಯಭಾರಿಯನ್ನು ಗಡಿಪಾರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಅಮೆರಿಕದ ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಾಖಿಬ್‌ ನಿಸಾರ್ ಸೋಮವಾರ ಕ್ಯಾಮೆರಾ ಎದುರು ಹಖ್ಖಾನಿ ಪ್ರಕರಣದ ವಿಚಾರಣೆ ನಡೆಸಿದರು ಎಂದು ಮೂಲಗಳು ಹೇಳಿವೆ.

‘ಈ ವಿಚಾರದಲ್ಲಿ ಪಾಕ್‌ ಮಾಧ್ಯಮಗಳು ಮೊದಲ ದಿನದಿಂದಲೂ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಕಿರುಕುಳ ನೀಡುತ್ತಿವೆ. ಪಾಕ್‌ ಅಧಿಕಾರಿಗಳು ಸುಳ್ಳು ಆಪಾದನೆ ಮೇಲೆ ನನ್ನನ್ನು ವಿಚಾರಣೆಗೆ ಒಳಪಡಿಸಲು ಬೆನ್ನುಬಿದ್ದಿದ್ದು, ಅಂತರರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಸುಳ್ಳು ಆಪಾದನೆಗಳು ಪಾಕಿಸ್ತಾನದ ಹೊರಗೆ ನಡೆಯಲಾರವು ಎಂದು ನಾನು ನಂಬಿದ್ದೇನೆ. ಸುಳ್ಳು ಆಪಾದನೆಗಳಿಂದ ನನ್ನನ್ನು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ’ ಎಂದು ಹುಸೈನ್‌ ಹಖ್ಖಾನಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.