ADVERTISEMENT

ಇರಾನ್‌: ಸಂಸದ ಸೇರಿ 21 ಸಾವು

ಕೋವಿಡ್‌–19: ಫಿಲಿಪ್ಪೀನ್ಸ್‌ನಲ್ಲಿ ತುರ್ತು ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 20:00 IST
Last Updated 7 ಮಾರ್ಚ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೆಹರಾನ್‌ (ಎಎಫ್‌ಪಿ, ಪಿಟಿಐ, ಎಪಿ, ರಾಯಿಟರ್ಸ್‌): ಇರಾನ್‌ ಸಂಸದ ಫೆತೇಮಾ ರಹ್‌ಬಾರ್‌ (55) ಕೋವಿಡ್ –19 ಸೋಂಕಿನಿಂದ ಶನಿವಾರ ಮೃತಪಟ್ಟಿದ್ದಾರೆ. ಇವರು ವೈರಸ್‌ನಿಂದ ಮೃತಪಟ್ಟ ಎರಡನೇ ಸಂಸದರಾಗಿದ್ದಾರೆ.

ಶನಿವಾರ ದೇಶದಲ್ಲಿ ಸೋಂಕಿನಿಂದ 21 ಸಾವನ್ನಪ್ಪಿದ್ದಾರೆ. ಒಂದು ದಿನದಲ್ಲಿ 1,076 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ವೇಗವಾಗಿ ವೈರಸ್‌ ಹರಡುತ್ತಿದ್ದು, ಇಲ್ಲಿಯವರೆಗೆ 145 ಮಂದಿ ಮೃತಪಟ್ಟಿದ್ದಾರೆ ಮತ್ತು 5,823 ಮಂದಿ ಸೋಂಕಿತರಾಗಿದ್ದಾರೆ.

‘16 ಸಾವಿರ ಮಂದಿ ಸೋಂಕಿನ ಶಂಕೆಯಿಂದ ಆಸ್ಪತ್ರೆಯಲ್ಲಿದ್ದಾರೆ’ ಎಂದು ಇರಾನ್‌ನ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಮನಿಲಾ ವರದಿ: ‘ದೇಶದಲ್ಲಿ ಮೊದಲ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದರಿಂದ ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಅವರು ತುರ್ತುಪರಿಸ್ಥಿತಿ ಹೇರಲಿದ್ದಾರೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ಶುಕ್ರವಾರದಿಂದ ಈಚೆಗೆ ಹೊಸದಾಗಿ ಮೂರು ಸೋಂಕಿತ ಪ್ರಕರಣಗಳು ದಾಖಲಾಗಿವೆ’ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಹೇಳಿದೆ.

ಚೀನಾದಲ್ಲಿ 3 ಸಾವಿರ ದಾಟಿದ ಸಾವಿನ ಸಂಖ್ಯೆ: ‘ಚೀನಾದಲ್ಲಿ ಮತ್ತೆ 28 ಮಂದಿ ವೈರಸ್‌ನಿಂದ ಮೃತಪಟ್ಟಿದ್ದು, ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,070ಕ್ಕೆ ಏರಿದೆ’ ಎಂದು ಚೀನಾ ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

‘ಜಗತ್ತಿನಾದ್ಯಂತ 3,500 ಮಂದಿ ಮೃತಪಟ್ಟಿದ್ದರೆ, 1 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಚೀನಾದಲ್ಲಿ ಸೋಂಕಿತರ 99 ಹೊಸ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಚೀನಾದಲ್ಲಿ 80,651 ಸೋಂಕಿತ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.