ADVERTISEMENT

ಇರಾನ್‌ ಮೇಲೆ ಸೈಬರ್‌ ದಾಳಿ

ಕ್ಷಿಪಣಿ ಉಡಾವಣೆ ಕಂಪ್ಯೂಟರ್‌ಗಳು ಗುರಿ

ಏಜೆನ್ಸೀಸ್
Published 23 ಜೂನ್ 2019, 19:39 IST
Last Updated 23 ಜೂನ್ 2019, 19:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ತನ್ನ ಬೇಹುಗಾರಿಕಾ ಡ್ರೋನ್‌ ಹೊಡೆದುರುಳಿಸಿದಕ್ಕಾಗಿ ಇರಾನ್‌ ಮೇಲೆ ಅಮೆರಿಕ ರಹಸ್ಯವಾಗಿ ಸೈಬರ್‌ ದಾಳಿ ನಡೆಸಿದೆ.

ಇರಾನ್‌ನ ಪ್ರಮುಖ ಕ್ಷಿಪಣಿ ಉಡಾವಣೆ ನಿಯಂತ್ರಣ ಕೇಂದ್ರಗಳ ಕಂಪ್ಯೂಟರ್‌ಗಳನ್ನು ಹಾಗೂ ಗುಪ್ತಚರ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ಸೈಬರ್‌ ದಾಳಿ ನಡೆಸಿದ್ದು, ಈ ದಾಳಿಯಿಂದ ಕ್ಷಿಪಣಿ ಉಡಾವಣೆ ನಿಯಂತ್ರಣ ವ್ಯವಸ್ಥೆ ಹಾನಿಗೀಡಾಗಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಸೇನಾ ದಾಳಿ ಬದಲಾಗಿರಹಸ್ಯವಾಗಿ ಸೈಬರ್‌ ದಾಳಿಗೆ ಅಮೆರಿಕ ಸೈಬರ್‌ ಕಮಾಂಡ್‌ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದರು ಎಂದು ಪೋಸ್ಟ್‌ ಉಲ್ಲೇಖಿಸಿದೆ.

ADVERTISEMENT

ಸ್ಟ್ರೈಟ್‌ ಆಫ್‌ ಹಾರ್ಮುಜ್‌ ಸಮುದ್ರ ಪ್ರದೇಶದಲ್ಲಿತೈಲ ಹಡಗುಗಳ ಮೇಲಿನ ದಾಳಿಗೆ ಇರಾನ್‌ ಕಾರಣ ಎಂದು ಅಮೆರಿಕ ದೂಷಿಸಿತ್ತು. ಸೈಬರ್‌ ದಾಳಿ ವೇಳೆ ಈ ಭಾಗದಲ್ಲಿ ಹಡಗುಗಳನ್ನು ಪತ್ತೆ ಹಚ್ಚುತ್ತಿದ್ದ ಗೂಢಾಚಾರ ತಂಡವನ್ನೂ ಅಮೆರಿಕ ಗುರಿಯಾಗಿಸಿತ್ತು ಎನ್ನುವ ಮಾಹಿತಿ ಲಭಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಅಮೆರಿಕ ರಕ್ಷಣಾ ವಿಭಾಗದ ಅಧಿಕಾರಿಗಳು ನಿರಾಕರಿಸಿದ್ದಾರೆ.

‘ನೀತಿ ಹಾಗೂ ಕಾರ್ಯಾಚರಣೆ ಭದ್ರತೆ ದೃಷ್ಟಿಯಿಂದಸೈಬರ್‌ ಸ್ಪೇಸ್‌ ಕಾರ್ಯಾಚರಣೆ, ಯೋಜನೆಗಳನ್ನು ಚರ್ಚಿಸುವುದಿಲ್ಲ’ ಎಂದು ರಕ್ಷಣಾ ವಿಭಾಗದ ವಕ್ತಾರ ಹೆದರ್‌ ಬಾಬ್‌ ತಿಳಿಸಿದ್ದಾರೆ. ಕಳೆದ ವರ್ಷ ಮೇನಲ್ಲಿ ಇರಾನ್‌ ಜೊತೆಗಿನ 2015ರ ಪರಮಾಣು ಒಪ್ಪಂದವನ್ನು ಟ್ರಂಪ್‌ ರದ್ದುಗೊಳಿಸಿದ ಬಳಿಕ ಇದೀಗ ಮತ್ತೆ ಎರಡು ದೇಶಗಳ ನಡುವೆ ಸಮರದ ಛಾಯೆ ಆವರಿಸಿದೆ.ತೈಲ ಮಾರಾಟಕ್ಕೆ ಕಡಿವಾಣ ಹೇರಿಇರಾನ್‌ ಆರ್ಥಿಕತೆಯನ್ನು ಕುಗ್ಗಿಸಲು ಹಲವು ದಂಡನೆ ರೂಪದಲ್ಲಿಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಹೇರಿತ್ತು.

ಸೇನಾ ದಾಳಿ ಆಯ್ಕೆಯೂ ಇದೆ: ಸಮಸ್ಯೆ ಬಗೆಹರಿಯದೇ ಇದ್ದರೆ ಸೇನಾ ದಾಳಿ ಆಯ್ಕೆಯೂ ನಮ್ಮ ಕೈಯಲ್ಲಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ‘ನಾನು 150 ಇರಾನಿ ಪ್ರಜೆಗಳನ್ನು ಕೊಲ್ಲಲು ಇಚ್ಛಿಸುವುದಿಲ್ಲ. ಅಗತ್ಯವಿದ್ದರಷ್ಟೇ ಸೇನಾ ದಾಳಿ ನಡೆಸುತ್ತೇವೆ. 30 ಜನರಿದ್ದ ಅಮೆರಿಕದ ಬೇಹುಗಾರಿಕಾ ವಿಮಾನವನ್ನು ಹೊಡೆದುರುಳಿಸದೇ ಇರಲು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ನಿರ್ಧರಿಸಿರುವುದನ್ನು ಶ್ಲಾಘಿಸುತ್ತೇನೆ’ ಎಂದು ಹೇಳಿದರು.

ಹಿಂದೆಯೂ ಸೈಬರ್‌ ದಾಳಿ

2010ರಲ್ಲಿ ಸ್ಟಂಕ್ಸ್‌ನೆಟ್‌ ಎಂಬ ವೈರಸ್‌ ಪತ್ತೆಯಾಗಿತ್ತು. ಇರಾನ್‌ನಲ್ಲಿನ ಅಣ್ವಸ್ತ್ರ ಪರೀಕ್ಷಾ ಕೇಂದ್ರಕ್ಕೆ ಹಾನಿಯುಂಟು ಮಾಡಲು ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇದನ್ನು ಸೃಷ್ಟಿಸಿತ್ತು ಎನ್ನಲಾಗಿದೆ.

ಇಂದು ಮತ್ತಷ್ಟು ನಿರ್ಬಂಧ

ಸೋಮವಾರ ಇರಾನ್‌ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುವುದಾಗಿ ಶನಿವಾರ ಟ್ರಂಪ್‌ ಟ್ವಿಟರ್‌ ಮೂಲಕ ತಿಳಿಸಿದ್ದಾರೆ. ‘ಇರಾನ್‌ ನಿರ್ಬಂಧ ಮುಕ್ತ ರಾಷ್ಟ್ರವಾಗುವ ದಿನವನ್ನು ಕಾಯುತ್ತಿದ್ದೇನೆ. ಹಾಗಾದರೂ ಈ ದೇಶ ಮತ್ತೊಮ್ಮೆ ಸಮೃದ್ಧವಾಗಲಿ’ ಎಂದು ಹೇಳಿದ್ದಾರೆ. ಈ ಮೂಲಕ ಇರಾನ್‌ ಅಣ್ವಸ್ತ್ರ ತ್ಯಜಿಸಲಿ ಎಂದು ಟ್ರಂಪ್‌ ಸೂಚಿಸಿದ್ದಾರೆ.

**

ಟೆಹರಾನ್‌ ಹಿಂಸೆ ಬದಿಗೊತ್ತಿ, ಸಂಧಾನಕ್ಕೆ ಮುಂದಾಗದೇ ಇದ್ದಲ್ಲಿ ಇರಾನ್‌ ಮೇಲಿನ ಆರ್ಥಿಕ ಒತ್ತಡ ಮುಂದುವರಿಯಲಿದೆ
- ಮೈಕ್‌ ಪಾಂಪಿಯೊ,ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.