ಇರಾನ್ ಸೋಮವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನ ಬೆನೆ ಬ್ರಾಕ್ ನಗರದ ಕಟ್ಟಡಗಳಿಗೆ ಹಾನಿಯಾಗಿದೆ
–ರಾಯಿಟರ್ಸ್ ಚಿತ್ರ
ಜೆರುಸಲೇಂ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಸೋಮವಾರವೂ ಮುಂದುವರಿದಿದ್ದು, ಉಭಯ ದೇಶಗಳು ಪರಸ್ಪರರ ವಿರುದ್ಧ ವೈಮಾನಿಕ ದಾಳಿಗಳನ್ನು ನಡೆಸಿವೆ.
ಇಸ್ರೇಲ್‌ನ ಪ್ರಮುಖ ನಗರಗಳಾದ ಟೆಲ್ ಅವಿವ್, ಬೆನೆ ಬ್ರಾಕ್, ಪೆಟಾ ಟಿಕ್ವಾ ಮತ್ತು ಹೈಫಾ ನಗರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದರ ಪರಿಣಾಮ ಇಸ್ರೇಲ್‌ನಲ್ಲಿ ಸೋಮವಾರ 11 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರದಿಂದ ನಡೆದಿರುವ ದಾಳಿಯಲ್ಲಿ ಮೃತಪಟ್ಟ ಇಸ್ರೇಲಿಗರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಇರಾನ್ ವಾಯು ದಾಳಿಗೆ ಸಿಲುಕಿದ ಇಸ್ರೇಲ್‌ನ ನಗರಗಳ ಪ್ರಮುಖ ರಸ್ತೆಗಳು, ಹಲವು ಕಟ್ಟಡಗಳು ನಾಶವಾಗಿವೆ. ಟೆಲ್ ಅವಿವ್ ನಗರದಲ್ಲಿನ ಅಮೆರಿಕದ ರಾಯಭಾರ ಕಚೇರಿಯ ಕಟ್ಟಡಕ್ಕೂ ಕ್ಷಿಪಣಿ ದಾಳಿಯಿಂದ ಸ್ವಲ್ಪ ಹಾನಿಯಾಗಿದೆ ಎಂದು ಇಸ್ರೇಲ್‌ನಲ್ಲಿರುವ ಅಮೆರಿಕದ ರಾಯಭಾರಿ ಮೈಕ್ ಹಕಬೀ ತಿಳಿಸಿದ್ದಾರೆ.
ನೆತನ್ಯಾಹು ಖಂಡನೆ:
ಇರಾನ್ ದಾಳಿಯನ್ನು ಖಂಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ನಡೆಸಿರುವ ಇರಾನ್‌ಗೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಗುಡುಗಿದ್ದಾರೆ.
ಇರಾನ್ ಮೂರನೇ ಒಂದರಷ್ಟು ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನು ನಾಶಪಡಿಸಿರುವುದಾಗಿ ಇರಾನ್ ಸೇನೆ ಸೋಮವಾರ ತಿಳಿಸಿದೆ.
ಉಭಯ ದೇಶಗಳ ನಡುವೆ ದಶಕಗಳಿಂದ ವೈರತ್ವವಿದ್ದು, ಇಸ್ರೇಲ್ ಶುಕ್ರವಾರ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ತನ್ನ ವೈರಿ ದೇಶವಾದ ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯಲು ಈ ದಾಳಿ ನಡೆಸಿದ್ದಾರೆ ಇಸ್ರೇಲ್ ಹೇಳಿತ್ತು.
ಇಸ್ರೇಲ್ ಶುಕ್ರವಾರದಿಂದ ನಡೆಸಿರುವ ದಾಳಿಯಿಂದಾಗಿ ಇರಾನ್‌ನಲ್ಲಿ ಕನಿಷ್ಠ 224 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ದಾಳಿಯಲ್ಲಿ ಹಿರಿಯ ಮಿಲಿಟರಿ ಕಮಾಂಡರ್‌ಗಳು, ಪರಮಾಣು ವಿಜ್ಞಾನಿಗಳು ಮತ್ತು ನಾಗರಿಕರು ಅಸುನೀಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉಭಯ ದೇಶಗಳ ನಡುವಿನ ಸೇನಾ ಸಂಘರ್ಷದಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚೀನಾ ಉಭಯ ದೇಶಗಳನ್ನು ಒತ್ತಾಯಿಸಿದೆ. ಅಲ್ಲದೆ, ಪ್ರಕ್ಷುಬ್ದ ವಾತಾವರಣ ವಿಸ್ತರಣೆಯಾಗದಂತೆ ಎಚ್ಚರವಹಿಸಬೇಕು ಎಂದೂ ಅದು ಆಗ್ರಹಿಸಿದೆ.
‘ಸಂಘರ್ಷ ನಿಲ್ಲಿಸಿ ಶಾಂತಿ ಕಾಯ್ದುಕೊಳ್ಳಿ. ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಿ’ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಒತ್ತಾಯಿಸಿದ್ದಾರೆ.
ಇಸ್ರೇಲ್ ದಾಳಿಯನ್ನು ಖಂಡಿಸುವಂತೆ ಇರಾನ್, ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯನ್ನು (ಐಎಇಎ) ಒತ್ತಾಯಿಸಿದೆ. ಅವಘಡಗಳಿಗೆ ಇಸ್ರೆಲ್ ಅನ್ನು ಹೊಣೆಗಾರರನ್ನಾಗಿಸಬೇಕು ಎಂದು ಅದು ಆಗ್ರಹಿಸಿದೆ.
ಇರಾನ್ ಜತೆಗಿನ ಎಲ್ಲ ಗಡಿಗಳನ್ನು ಬಂದ್ ಮಾಡಿದ ಪಾಕಿಸ್ತಾನ. ವ್ಯಾಪಾರ ವಹಿವಾಟು ಮುಂದುವರಿಕೆ
ಇಸ್ರೇಲ್ ವಾಯುದಾಳಿಯಿಂದಾಗಿ ಟೆಹರಾನ್‌ನಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಜನರು.
ಬಾಂಬ್‌ಗಳಿಂದ ಆಶ್ರಯ ಪಡೆಯಲು ಮಸೀದಿ, ಶಾಲೆಗಳನ್ನು ಉಪಯೋಗಿಸುವಂತೆ ಅಧಿಕಾರಿಗಳ ಸಲಹೆ
‘ಇರಾನ್ ರಾಜಧಾನಿ ಟೆಹರಾನ್ ಮೇಲೆ ವೈಮಾನಿಕ ನಿಯಂತ್ರಣ ಸಾಧಿಸಲಾಗಿದೆ’ ಎಂದು ಇಸ್ರೇಲ್ ಸೇನೆ ಸೋಮವಾರ ಪ್ರತಿಪಾದಿಸಿದೆ ‘ಇರಾನ್‌ನ ವಾಯುರಕ್ಷಣಾ ಹಾಗೂ ಕ್ಷಿಪಣಿ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದ್ದೇವೆ. ಹೀಗಾಗಿ ನಾವು ಟೆಹರಾನ್ ಮೇಲೆ ಯಾವುದೇ ಬೆದರಿಕೆ ಇಲ್ಲದೆ ವೈಮಾನಿಕ ಕಾರ್ಯಾಚರಣೆಗಳನ್ನು ನಡೆಸಬಹುದಾಗಿದೆ’ ಎಂದು ಅದು ತಿಳಿಸಿದೆ.
ಪಶ್ಚಿಮ ಇರಾನ್‌ನಿಂದ ಟೆಹರಾನ್‌ವರೆಗಿನ ವಾಯುಸೀಮೆ ಇಸ್ರೇಲ್‌ನ ನಿಯಂತ್ರಣದಲ್ಲಿದೆ. ಇರಾನ್‌ನ 120ಕ್ಕೂ ಹೆಚ್ಚು ಕ್ಷಿಪಣಿಗಳನ್ನು ನಾಶಪಡಿಸಿದ್ದೇವೆ ಎಂದು ಸೇನೆ ಮಾಹಿತಿ ಹಂಚಿಕೊಂಡಿದೆ. ಇರಾನ್ ದಾಳಿಯಿಂದ ಇಲ್ಲಿಯವರೆಗೆ ಇಸ್ರೇಲ್‌ನಲ್ಲಿ 24 ಜನರು ಮೃತಪಟ್ಟಿದ್ದು 500 ಜನರು ಗಾಯಗೊಂಡಿದ್ದಾರೆ. ಇರಾನ್ 370ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ನೂರಾರು ಡ್ರೋಣ್‌ಗಳಿಂದ ದಾಳಿ ನಡೆಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ನವದೆಹಲಿ: ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಾರ್ಯೋನ್ಮುಖವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಅಲ್ಲಿನ ಭಾರತದ ರಾಯಭಾರ ಕಚೇರಿಯು ಇರಾನ್– ಇಸ್ರೇಲ್ ನಡುವಿನ ಸಂಘರ್ಷ ಮತ್ತು ಟೆಹರಾನ್‌ನಲ್ಲಿನ ಭದ್ರತಾ ಪರಿಸ್ಥಿತಿಯ ಮೇಲೆ ನಿಗಾವಹಿಸಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ. ಸಲಹೆ: ‘ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕರಾಗಿರಬೇಕು. ಅನಗತ್ಯ ಸಂಚಾರವನ್ನು ನಿಲ್ಲಿಸಬೇಕು. ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗಮನಿಸಿ ಸಲಹೆ ಸೂಚನೆಗಳನ್ನು ಪಾಲಿಸಬೇಕು’ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಸಲಹೆ ನೀಡಿದೆ. ಇದನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.