ADVERTISEMENT

Iran-Israel War | ಮುಂದೆ ಆಗುವುದಕ್ಕೆಲ್ಲಾ ಅಮೆರಿಕವೇ ಹೊಣೆ: ಇರಾನ್

ರಾಯಿಟರ್ಸ್
Published 22 ಜೂನ್ 2025, 10:32 IST
Last Updated 22 ಜೂನ್ 2025, 10:32 IST
   

ಟೆಹರಾನ್‌: ತನ್ನ ಪರಮಾಣು ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿರುವ ಅಮೆರಿಕದ ವಿರುದ್ಧ ಇರಾನ್‌ ಕಿಡಿಕಾರಿದೆ.‌ ಮುಂದೆ ಆಗುವುದಕ್ಕೆಲ್ಲಾ ಅಮೆರಿಕವೇ ಹೊಣೆಯಾಗಲಿದೆ ಎಂದು ಹೇಳಿದೆ.

ಇಸ್ರೇಲ್‌ – ಇರಾನ್‌ ಸಂಘರ್ಷ ಮತ್ತಷ್ಟು ತೀವ್ರಗೊಳುತ್ತಿರುವ ಹೊತ್ತಲ್ಲಿ ಮಧ್ಯಪ್ರವೇಶಿಸಿರುವ ಅಮೆರಿಕ, ಇರಾನ್‌ನ ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗಳ ಮೇಲೆ ಇಂದು (ಭಾನುವಾರ, ಜೂನ್‌ 22) ಬೆಳಿಗ್ಗೆ ದಾಳಿ ಮಾಡಿದೆ.

ಅಮೆರಿಕ ದಾಳಿಯನ್ನು ಖಂಡಿಸಿರುವ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, 'ಇರಾನ್‌ ಅಣು ಕೇಂದ್ರಗಳ ಮೇಲೆ ದಾಳಿ ಮಾಡಿರುವ ಅಮೆರಿಕವೇ ಮುಂದೆ ಎದುರಾಗುವ ಎಲ್ಲ ಪರಿಣಾಮಗಳಿಗೆ ಹೊಣೆ' ಎಂದು ಹೇಳಿದ್ದಾರೆ.

ADVERTISEMENT

ಇರಾನ್‌ ಮೇಲಿನ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ನಲ್ಲಿ ಇಂದು ಬೆಳಿಗ್ಗೆ ಮಾಹಿತಿ ಹಂಚಿಕೊಂಡಿದ್ದರು. 'ಇರಾನ್‌ನ ಫೋರ್ಡೊ, ನತಾಂಜ್‌ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹಿಂದಿರುಗಿವೆ. ಅಮೆರಿಕದ ಮಹಾನ್‌ ಯೋಧರಿಗೆ ಅಭಿನಂದನೆಗಳು. ಇಂತಹ ಕಾರ್ಯಾಚರಣೆ ನಡೆಸಲು ಜಗತ್ತಿನ ಬೇರಾವ ದೇಶದ ಸೈನ್ಯಕ್ಕೂ ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದರು.

ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿರುವುದನ್ನು ಶ್ಲಾಘಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಡೊನಾಲ್ಡ್‌ ಟ್ರಂಪ್‌ ಅವರು ದಿಟ್ಟ ನಿರ್ಧಾರ ಮಾಡಿದ್ದಾರೆ ಎಂದು ಹೊಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.