
ಜಿನೀವಾ/ಪ್ಯಾರಿಸ್: ಆಡಳಿತ ವಿರೋಧಿ ಪ್ರತಿಭಟನಕಾರರ ಮೇಲೆ ಇರಾನ್ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ವರದಿಯಾಗುತ್ತಿರುವ ಹಿಂಸಾಚಾರ ಕುರಿತು ವ್ಯಾಪಕ ಆತಂಕ ವ್ಯಕ್ತವಾಗುತ್ತಿದೆ. ಪ್ರತಿಭಟನೆ ನಡೆಸುತ್ತಿರುವವ ಪೈಕಿ ಮೃತಪಟ್ಟವರ ಸಂಖ್ಯೆಯ ಬಗ್ಗೆಯೂ ನಿಖರ ಮಾಹಿತಿ ಸಿಗುತ್ತಿಲ್ಲ.
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ 648 ಜನರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ನಾರ್ವೆ ಮೂಲದ ಎನ್‌ಜಿಒ ಇರಾನ್ ಹ್ಯೂಮನ್ ರೈಟ್ಸ್(ಐಎಚ್‌ಆರ್) ಹೇಳಿದೆ.
‘ಸಾವಿನ ಸಂಖ್ಯೆ ಇನ್ನೂ ಹೆಚ್ಚು ಇರುವ ಸಾಧ್ಯತೆ ಇದೆ. ಕೆಲ ಅಂದಾಜುಗಳ ಪ್ರಕಾರ 6 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿರಬಹುದು ಹಾಗೂ 10 ಸಾವಿರ ಜನರನ್ನು ಬಂಧಿಸಿರುವ ಸಾಧ್ಯತೆ‘ ಎಂದು ಐಎಚ್‌ಆರ್ ಹೇಳಿದೆ.
‘ಇರಾನ್‌ನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿರುವ ಕಾರಣ, ಸಾವು–ನೋವು ಕುರಿತ ವರದಿಗಳನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳುವುದು ಕಷ್ಟವಾಗಿದೆ‘ ಎಂದೂ ಹೇಳಿದೆ.
ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಹಿಂಸಾಚಾರಕ್ಕೆ ‘ಭಯೋತ್ಪಾದಕರೇ‘ ಕಾರಣ ಎಂದು ಇರಾನ್ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
‘ನಾಗರಿಕರು ಹಾಗೂ ಭದ್ರತಾ ಪಡೆಗಳ ಸಾವಿಗೆ ಭಯೋತ್ಪಾದಕರೇ ಕಾರಣ‘ ಎಂದೂ ಆರೋಪಿಸಿದ್ದಾರೆ.
‘ಅಹವಾಲು ಆಲಿಸಿ’: ‘ಇರಾನ್ ಜನರು ನ್ಯಾಯ, ಸಮಾನತೆ ಬೇಡಿಕೆ ಮುಂದಿಟ್ಟುಕೊಂಡು ಹೋರಾಡುತ್ತಿದ್ದು, ಅವರ ಅಹವಾಲುಗಳನ್ನು ಆಲಿಸಬೇಕು‘ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಕರ್ ತುರ್ಕ್ ಆಗ್ರಹಿಸಿದ್ದಾರೆ.
ಕೆಲ ನಿರ್ಬಂಧ ಸಡಿಲಿಕೆ
ಆಡಳಿತ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಸಂಬಂಧ ವಿಧಸಲಾಗಿದ್ದ ಹಲವು ನಿರ್ಬಂಧಗಳನ್ನು ಇರಾನ್ ಸರ್ಕಾರ ಮಂಗಳವಾರ ಸಡಿಲಿಸಿದೆ. ಆದರೆ ಇಂಟರ್‌ನೆಟ್ ಮೇಲಿನ ನಿರ್ಬಂಧ ಮುಂದುವರಿಸಲಾಗಿದೆ. ಜನರು ತಮ್ಮ ಮೊಬೈಲ್ ಫೋನ್ ಬಳಸಿ ವಿದೇಶಗಳಿಗೆ ಕರೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಹೊರದೇಶಗಳಲ್ಲಿ ಇರುವವರು ಇರಾನ್‌ನಲ್ಲಿರುವ ತಮ್ಮವರೊಂದಿಗೆ ಮಾತನಾಡಲು ಅವಕಾಶ ಇಲ್ಲ.
‘ಎಸ್‌ಎಂಎಸ್ ಸೇವೆ ಕೂಡ ನಿಧಾನವಾಗಿದೆ. ಸರ್ಕಾರ ಅನುಮೋದಿಸಿರುವ ವೆಬ್‌ಸೈಟ್‌ಗಳನ್ನು ಮಾತ್ರ ಬಳಕೆ ಮಾಡಲು ಸಾಧ್ಯವಾಗುತ್ತಿದೆ‘ ಎಂದು ಜನರು ತಿಳಿಸಿದ್ದಾರೆ.
ಬಂಧನ:
ಇಸ್ರೇಲ್ ಜೊತೆ ನಂಟು ಹೊಂದಿರುವ ಭಯೋತ್ಪಾದಕ ಗುಂಪುಗಳನ್ನು ಆಗ್ನೇಯ ಭಾಗದ ಜಹಿದಾನ್ ನಗರದಲ್ಲಿ ಭದ್ರತಾ ಪಡೆಗಳು ಬಂಧಿಸಿವೆ ಎಂದು ಸರ್ಕಾರಿ ಒಡೆತನದ ಸುದ್ದಿವಾಹಿನಿ ವರದಿ ಮಾಡಿದೆ. ‘ಅಮೆರಿಕ ತಯಾರಿಸಿರುವ ಬಂದೂಕುಗಳು ಹಾಗೂ ಸ್ಫೋಟಕಗಳನ್ನು ಹೊಂದಿದ್ದ ಗುಂಪು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿತ್ತು’ ಎಂದು ತಿಳಿಸಿದೆ. ಈ ಕುರಿತು ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಮುಖ ಅಂಶಗಳು
* ವಿಶ್ವಬ್ಯಾಂಕ್ ದತ್ತಾಂಶದ ಪ್ರಕಾರ 2022ರಲ್ಲಿ ಇರಾನ್ 147 ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡಿದೆ
* ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಭದ್ರತಾ ಪಡೆಗಳು ಬೆಂಬಲಿಸಬೇಕು ಎಂದು ಇರಾನ್‌ನ ಮಾಜಿ ಮಹಾರಾಣಿ 87 ವರ್ಷದ ಫರಾಹ್ ಪಹ್ಲವಿ ಆಗ್ರಹಿಸಿದ್ದಾರೆ
* ಇರಾನ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃ ಹೋರಾಟಗಾರ್ತಿ ಮಲಾಲ ಯೂಸುಫ್‌ಝೈ ಬೆಂಬಲ ಸೂಚಿಸಿದ್ದಾರೆ
* ಇರಾನ್ ಅಧಿಕಾರಿಗಳೊಂದಿಗೆ ನಿಗದಿಯಾಗಿದ್ದ ಸಭೆಯನ್ನು ರದ್ದುಗೊಳಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ
* ಇರಾನ್ ಮತ್ತು ಅಮೆರಿಕ ಸೇನೆಗಳ ನಡುವೆ ಸಂಭವಿಸಬಹದಾದ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಗಂಭೀರ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಕತಾರ್ ಎಚ್ಚರಿಸಿದೆ