
ಇರಾನ್ ಧ್ವಜ
ಟೆಹರಾನ್: ಹಣದುಬ್ಬರ ಹಾಗೂ ಆಡಳಿತ ವೈಫಲ್ಯದ ವಿರುದ್ಧ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮೃತಪಟ್ಟವರ ಸಂಖ್ಯೆ 5,000ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಮೃತರಲ್ಲಿ ಕನಿಷ್ಠ 500 ಮಂದಿ ಭದ್ರತಾ ಸಿಬ್ಬಂದಿ ಎನ್ನಲಾಗಿದ್ದು, 'ಅಮಾಯಕ ಇರಾನಿಯನ್ನರ ಸಾವಿಗೆ ಭಯೋತ್ಪಾದಕರು ಮತ್ತು ಸಶಸ್ತ್ರ ದಂಗೆಕೋರರೇ ಕಾರಣ' ಎಂದು ಅಧಿಕಾರಿಗಳು ಆರೋಪಿಸಿರುವುದಾಗಿಯೂ ವರದಿಗಳಲ್ಲಿ ಉಲ್ಲೇಖವಾಗಿದೆ.
ಇರಾನ್‌ನ ವಾಯವ್ಯ ಭಾಗದಲ್ಲಿರುವ ಕುರ್ದಿಷ್ ಪ್ರದೇಶಗಳಲ್ಲಿ ತೀವ್ರ ಘರ್ಷಣೆಗಳು ಉಂಟಾಗಿದ್ದು, ಅಲ್ಲಿ ಹೆಚ್ಚಿನ ಸಾವು–ನೋವುಗಳು ಸಂಭವಿಸಿವೆ. ಈ ಪ್ರದೇಶಗಳಲ್ಲಿ ಕುರ್ದಿಷ್ ಪ್ರತ್ಯೇಕವಾದಿಗಳು ಸಕ್ರಿಯರಾಗಿದ್ದಾರೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಸಾವಿನ ಒಟ್ಟು ಸಂಖ್ಯೆಯು ಏಕಾಏಕಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇಲ್ಲ' ಎಂದಿರುವ ಅಧಿಕಾರಿ, 'ಇಸ್ರೇಲ್ ಮತ್ತು ವಿದೇಶಗಳಲ್ಲಿ ಇರುವ ಸಶಸ್ತ್ರ ಗುಂಪುಗಳು ಪ್ರತಿಭಟನಾಕಾರರನ್ನು ಬೆಂಬಲಿಸಿ, ಸಜ್ಜುಗೊಳಿಸಿವೆ' ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ಸೃಷ್ಟಿಯಾಗಿರುವ ಅಶಾಂತಿಗೆ ಇಸ್ರೇಲ್ ಸೇರಿದಂತೆ ಕೆಲವು ವಿದೇಶಗಳೇ ಕಾರಣ ಎಂದು ಇರಾನ್ ಅಧಿಕಾರಿಗಳು ನಿರಂತರವಾಗಿ ದೂರುತ್ತಿದ್ದಾರೆ. ಇಸ್ರೇಲ್ ಪಡೆಗಳು 2025ರ ಜೂನ್‌ನಲ್ಲಿ ಇರಾನ್ ಮೇಲೆ ದಾಳಿ ನಡೆಸಿದ್ದವು.
ಇರಾನ್‌ನಲ್ಲಿ ಸಾವಿನ ಸಂಖ್ಯೆ 3,308ಕ್ಕೆ ತಲುಪಿದೆ. ಇನ್ನೂ 4,382 ಪ್ರಕರಣಗಳು ಪರಿಶೀಲನೆ ಹಂತದಲ್ಲಿವೆ ಎಂದು ಅಮೆರಿಕ ಮೂಲಕ ಮಾನವ ಹಕ್ಕು ಸಂಘಟನೆ ಶನಿವಾರ ಹೇಳಿದೆ. ಹಾಗೆಯೇ, ಪ್ರತಿಭಟನೆ ಸಂಬಂಧ ಇದುವರೆಗೆ 24,000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವುದು ಖಚಿತವಾಗಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.