ADVERTISEMENT

ಕೂಡಲೇ ಇರಾನ್‌ನಿಂದ ಹೊರಡಿ, ಸಹಾಯ ನಿರೀಕ್ಷಿಸಬೇಡಿ: ತನ್ನ ಪ್ರಜೆಗಳಿಗೆ ಅಮೆರಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 6:45 IST
Last Updated 13 ಜನವರಿ 2026, 6:45 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌

   

ಕೃಪೆ: ಪಿಟಿಐ

ವಾಷಿಂಗ್ಟನ್: ಆಡಳಿತ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಿ, ಪ್ರತಿಭಟನಕಾರರ ಸಾವಿಗೆ ಕಾರಣವಾಗುತ್ತಿರುವ ಇರಾನ್‌ ವಿರುದ್ಧ ದಾಳಿ ಮಾಡುವ ಬೆದರಿಕೆ ಹಾಕಿದ ಬೆನ್ನಲ್ಲೇ ತಮ್ಮ ದೇಶದ ನಾಗರಿಕರಿಗೆ ಇರಾನ್ ತೊರೆಯುವಂತೆ ಅಮೆರಿಕ ಸೂಚನೆ ನೀಡಿದೆ.

ADVERTISEMENT

ಇರಾನ್‌ನ ಖಮೇನಿ ಆಡಳಿತದಲ್ಲಿ ಬೆಲೆ ಏರಿಕೆ, ಅರಾಜಕತೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ಅದು ಹಿಂಸರೂಪಕ್ಕೆ ತಿರುಗಿ 600 ಮಂದಿ ಮೃತಪಟ್ಟಿದ್ದಾರೆ. ಮತ್ತಷ್ಟು ಹಿಂಸೆ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಪ್ರಜೆಗಳಿಗೆ ಇರಾನ್ ತೊರೆಯುವಂತೆ ಎಚ್ಚರಿಕೆ ನೀಡಿದೆ.

‘ಇರಾನ್‌ನಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿದ್ದು, ಹಿಂಸಾತ್ಮಕವಾಗಿ ಬದಲಾಗಬಹುದು. ಇದರ ಪರಿಣಾಮವಾಗಿ ಬಂಧನ ಮತ್ತು ಜೀವಹಾನಿ ಸಂಭವಿಸಬಹುದು. ಹೆಚ್ಚಿದ ಭದ್ರತಾ ಕ್ರಮಗಳು, ರಸ್ತೆ ಮುಚ್ಚುವಿಕೆ, ಸಾರ್ವಜನಿಕ ಸಾರಿಗೆ ಅಡಚಣೆಗಳು ಮತ್ತು ಇಂಟರ್ನೆಟ್ ನಿರ್ಬಂಧಗಳು ಮುಂದುವರೆದಿವೆ’ಎಂದು ಎಚ್ಚರಿಕೆ ತಿಳಿಸಿದೆ.

ಇರಾನ್ ಸರ್ಕಾರವು ಮೊಬೈಲ್, ಲ್ಯಾಂಡ್‌ಲೈನ್ ಮತ್ತು ಇಂಟರ್ನೆಟ್ ನೆಟ್‌ವರ್ಕ್‌ ಅನ್ನು ನಿರ್ಬಂಧಿಸಿದೆ ಎಂದು ಅದು ಹೇಳಿದೆ.

ಹಲವಾರು ವಿಮಾನಯಾನ ಸಂಸ್ಥೆಗಳು ಇರಾನ್‌ಗೆ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ಸೀಮಿತಗೊಳಿಸಿವೆ ಅಥವಾ ರದ್ದುಗೊಳಿಸಿವೆ ಎಂದು ಅದು ತಿಳಿಸಿದೆ.

ತಕ್ಷಣದ ಎಚ್ಚರಿಕೆಯನ್ನು ಪರಿಗಣಿಸಿ, ಅರ್ಮೇನಿಯಾ ಮತ್ತು ಟರ್ಕಿ ಮೂಲಕ ಭೂಮಾರ್ಗದಲ್ಲಿ ಇರಾನ್‌ನಿಂದ ಹೊರಡುವಂತೆ ಅಮೆರಿಕದ ನಾಗರಿಕರಿಗೆ ರಾಯಭಾರ ಕಚೇರಿ ಸೂಚಿಸಿದೆ.

‘ನಿರಂತರ ಇಂಟರ್ನೆಟ್ ಕಡಿತ ಇರುವುದರಿಂದ ಪರ್ಯಾಯ ಸಂವಹನ ವಿಧಾನಗಳನ್ನು ಯೋಜಿಸಬೇಕು ಮತ್ತು ಸುರಕ್ಷಿತವಾಗಿದ್ದರೆ, ಅರ್ಮೇನಿಯಾ ಅಥವಾ ಟರ್ಕಿ ಮೂಲಕ ಭೂಮಾರ್ಗದಲ್ಲಿ ಇರಾನ್‌ನಿಂದ ಹೊರಡುವುದನ್ನು ಪರಿಗಣಿಸಬೇಕು’ಎಂದು ಎಚ್ಚರಿಕೆಯಲ್ಲಿ ಸೇರಿಸಲಾಗಿದೆ.

’ಈಗಲೇ ಇರಾನ್‌ನಿಂದ ಹೊರಡಿ, ಅಮೆರಿಕ ಸರ್ಕಾರದ ಸಹಾಯವನ್ನು ಅವಲಂಬಿಸಬೇಡಿ. ನಿಮ್ಮದೇ ಯೋಜನೆ ರೂಪಿಸಿಕೊಳ್ಳಿ’ ಎಂದು ಅದು ಹೇಳಿದೆ.

ಹೊರಡಲು ಸಾಧ್ಯವಾಗದವರಿಗೆ, ಸುರಕ್ಷಿತ ಸ್ಥಳದಲ್ಲಿ ಅಗತ್ಯ ಸಾಮಾಗ್ರಿಗಳನ್ನು ಇಟ್ಟುಕೊಂಡು ಇರುವಂತೆ ರಾಯಭಾರ ಕಚೇರಿ ಸಲಹೆ ನೀಡಿದೆ.

ಅಮೆರಿಕ ಪ್ರಜೆಗಳೆಂದು ತೋರಿಸಿಕೊಳ್ಳದೆ ಸುರಕ್ಷಿತವಾಗಿ ಹೊರಡಿ. ಸುತ್ತಮುತ್ತ ನಡೆಯುತ್ತಿರುವ ಘಟನೆಗಳ ಬಗ್ಗೆ ಗಮನವಿರಲಿ ಎಂದೂ ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.