ADVERTISEMENT

ಇರಾನ್‌ ಸರ್ಕಾರದ ವಿರುದ್ಧ ಜನಾಕ್ರೋಶ: ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ 15ಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 15:47 IST
Last Updated 4 ಜನವರಿ 2026, 15:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಟೆಹರಾನ್/ ದುಬೈ: ಇರಾನ್‌ನಲ್ಲಿ ಆರ್ಥಿಕತೆಯ ಕುಸಿತದಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ.

ADVERTISEMENT

ಆರ್ಥಿಕ ಕುಸಿತ, ಹಣದುಬ್ಬರ, ಬೆಲೆಯೇರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳು ಯುವಜನರನ್ನು ಬೀದಿಗಿಳಿಯುವಂತೆ ಮಾಡಿದೆ. ರಾಜಧಾನಿ ಟೆಹರಾನ್‌ನಲ್ಲಿ ಆರಂಭವಾದ ಪ್ರತಿಭಟನೆ ಇದೀಗ ಇತರ ಕೆಲವು ನಗರಗಳಿಗೂ ವ್ಯಾಪಿಸಿದೆ. ಕೌಮ್‌ ಮತ್ತು ಹರ್ಸಿನ್‌ ಪಟ್ಟಣಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೆರ್ಮನ್‌ಶಾ ಪ್ರಾಂತ್ಯದಲ್ಲಿ ಭದ್ರತಾ ಪಡೆಯ ಸಿಬ್ಬಂದಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ.

ಇರಾನ್‌ನ ಒಟ್ಟು 31 ಪ್ರಾಂತ್ಯಗಳಲ್ಲಿ 25 ಪ್ರಾಂತ್ಯಗಳಿಗೆ ಪ್ರತಿಭಟನೆಯ ಕಾವು ಹಬ್ಬಿದೆ. ಈ ಪ್ರಾಂತ್ಯಗಳ 170ಕ್ಕೂ ಅಧಿಕ ತಾಣಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 580 ಮಂದಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.

ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಪ್ರತಿಭಟನೆಯ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ‘ನಾವು ಪ್ರತಿಭಟನಕಾರರೊಂದಿಗೆ ಮಾತನಾಡುತ್ತೇವೆ. ಅಧಿಕಾರಿಗಳು ಖಂಡಿತವಾಗಿಯೂ ಅವರೊಂದಿಗೆ ಮಾತನಾಡಬೇಕು. ಆದರೆ, ಗಲಭೆಕೋರರೊಂದಿಗೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಗಲಭೆಕೋರರನ್ನು ಮಟ್ಟಹಾಕಬೇಕು’ ಎಂದು ಹೇಳಿದ್ದಾರೆ.

‘ಇರಾನ್‌ ಸರ್ಕಾರವು ಪ್ರತಿಭಟನಕಾರರ ಮೇಲೆ ಹಿಂಸೆ ನಡೆಸಿದರೆ ನಾವು ಮಧ್ಯಪ್ರವೇಶಿಸುತ್ತೇವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶುಕ್ರವಾರ ಎಚ್ಚರಿಸಿದ್ದರು. ‘ನಮ್ಮ ಆಂತರಿಕ ವಿಷಯದಲ್ಲಿ ಕೈಹಾಕುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಇರಾನ್ ತಿರುಗೇಟು ನೀಡಿತ್ತು.

2022ರ ಬಳಿಕ ಇರಾನ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಪ್ರತಿಭಟನೆ ಇದಾಗಿದೆ. ಮೆಹ್ಸಾ ಅಮೀನಿ ಎಂಬ ಯುವತಿ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಮೃತಪಟ್ಟ ಘಟನೆಯು 2022ರಲ್ಲಿ ಇರಾನ್‌ನಲ್ಲಿ ದೊಡ್ಡ ಪ್ರತಿಭಟನೆಗೆ ಕಾರಣವಾಗಿತ್ತು. ಹಿಜಾಬ್‌ ಸರಿಯಾಗಿ ಧರಿಸಿಲ್ಲ ಎನ್ನವ ಆರೋಪದ ಮೇಲೆ ಪೊಲೀಸರು ಮೆಹ್ಸಾ ಅವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.