ದುಬೈ: ತನ್ನ ಅಣ್ವಸ್ತ್ರ, ಸೇನಾನೆಲೆಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್, ಇಸ್ರೇಲ್‌ನ ಟೆಲ್ ಅವೀವ್, ಜೆರುಸಲೇಂ ನಗರಗಳ ಮೇಲೆ ಶನಿವಾರ ನೂರಾರು ಕ್ಷಿಪಣಿ, ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ.
ಶುಕ್ರವಾರ ರಾತ್ರಿ, ಶನಿವಾರ ಬೆಳಿಗ್ಗೆ ದಾಳಿ ನಡೆದಿದೆ. ಈ ದಾಳಿಯಿಂದಾಗಿ ಹಲವು ಕಟ್ಟಡಗಳು ತೀವ್ರ ಜಖಂಗೊಂಡಿವೆ. ನಗರಗಳ ಕೇಂದ್ರ ಭಾಗದಲ್ಲಿ ದಟ್ಟ ಹೊಗೆ, ಬೆಂಕಿ ಆವರಿಸಿದ್ದು ಕಂಡುಬಂತು. ಪ್ರಾಥಮಿಕ ವರದಿ ಪ್ರಕಾರ, ದಾಳಿಯಲ್ಲಿ ಮೂವರು ಸತ್ತಿದ್ದು, ಹಲವರು ಗಾಯಗೊಂಡಿದ್ದಾರೆ.
ಇರಾನ್‌ನ ಅಣ್ವಸ್ತ್ರ, ಸೇನಾ ನೆಲೆಗಳ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿತ್ತು. ಸದ್ಯ, ಇಸ್ರೇಲ್ ತನ್ನ ಪ್ರಜೆಗಳಿಗೆ ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆಯುವಂತೆ ಸಲಹೆ ಮಾಡಿದೆ.
‘ತಾನು ಕೈಗೊಂಡ ಪ್ರತೀಕಾರ ದಾಳಿಯು ಗಂಭೀರ ಸ್ವರೂಪದ ದಂಡನಾ ಕ್ರಮವಾಗಿತ್ತು ಎಂದು ಇರಾನ್ ಸೇನೆಯು ವ್ಯಾಖ್ಯಾನಿಸಿದೆ’ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ (ಐಆರ್‌ಎನ್‌ಎ) ವರದಿ ಮಾಡಿದೆ.
ಖಮೇನಿ ಎಚ್ಚರಿಕೆ: ಇರಾನ್‌ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ, ‘ಗಂಭೀರ ಅಪರಾಧ ಎಸಗಿರುವ ಅವರು (ಇಸ್ರೇಲ್) ಸುರಕ್ಷಿತವಾಗಿ ಪಾರಾಗಲು ಬಿಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ. ‘ದಾಳಿ ಮಾಡಿದೆವು, ಮುಗಿಯಿತು ಎಂದು ಅವರು ಭಾವಿಸಬೇಕಿಲ್ಲ. ಅವರು ದಾಳಿ ನಡೆಸಿದ್ದಾರೆ. ಯುದ್ಧ ಆರಂಭಿಸಿದ್ದಾರೆ. ಪ್ರತೀಕಾರ ಖಚಿತ’ ಎಂದು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಈ ಮಧ್ಯೆ, ಇರಾನ್‌ನಲ್ಲಿನ ವಿಶ್ವಸಂಸ್ಥೆಯ ರಾಯಭಾರಿಯು, ‘ಇಸ್ರೇಲ್‌ನ ದಾಳಿಯಿಂದಾಗಿ 78 ಜನರು ಮೃತಪಟ್ಟಿದ್ದು, ಕನಿಷ್ಠ 320 ಜನರು ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ಟೆಲ್ ಅವಿವ್‌ನ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಇಸ್ರೇಲ್‌ನ ಅಗ್ನಿಶಾಮಕ ದಳವು ಹೇಳಿಕೆ ನೀಡಿದ್ದು, ಕಟ್ಟಡ ಸಂಕೀರ್ಣದ ಮೇಲೆ ನಡೆದ ದಾಳಿಯಿಂದ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಇಸ್ರೇಲ್‌ನ ರಿಶಾನ್ ಲೀಜಿಯಾನ್ ನಗರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇಬ್ಬರು ಸತ್ತಿದ್ದು, ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ. ನಾಲ್ಕು ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದೆ.
ಇರಾನ್‌ನ ಅರೆ ಸರ್ಕಾರಿ ಸುದ್ದಿಸಂಸ್ಥೆ ‘ತಸ್ನಿಂ’, ಟೆಹರಾನ್‌ನ ಮೆಹ್ರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದು ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡಿದೆ.
ಟೆಲ್ ಅವಿವ್ ನಗರದಲ್ಲಿ ನಡೆದ ದಾಳಿಯಲ್ಲಿ 34 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಮಹಿಳೆ ಅವಶೇಷಗಳಡಿ ಸಿಕ್ಕಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಲಿನ್ಸನ್ ಆಸ್ಪತ್ರೆಯ ವಕ್ತಾರರು, ಚಿಕಿತ್ಸೆಗೆ ಕರೆತಂದಿದ್ದ ಮಹಿಳೆಯೊಬ್ಬರು ಸತ್ತಿದ್ದು, ಮೃತರ ಸಂಖ್ಯೆ 3ಕ್ಕೆ ಏರಿದೆ. ಅಲ್ಲದೆ, ಶನಿವಾರದ ದಾಳಿಯಲ್ಲಿ ಏಳು ಮಂದಿಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಅಮೆರಿಕದ ವಾಯುಗಡಿ ಸುರಕ್ಷತಾ ವ್ಯವಸ್ಥೆಯು ಈ ವಲಯದಲ್ಲಿ ಇರಾನ್‌ನ ಕ್ಷಿಪಣಿಗಳನ್ನು ತಡೆದು ಉರುಳಿಸಲು ನೆರವಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುದ್ಧದ ಕಾರ್ಮೊಡ: ಇಸ್ರೇಲ್‌ನ ದಾಳಿ ಮತ್ತು ಇರಾನ್‌ನ ತೀವ್ರ ಪ್ರತೀಕಾರದ ಹಿನ್ನೆಲೆಯಲ್ಲಿ ಮಧ್ಯಪೂರ್ವ ಪ್ರಾಂತ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಈ ಪ್ರಾಂತ್ಯದ ಹಲವು ದೇಶಗಳು ಇಸ್ರೇಲ್‌ನ ದಾಳಿಯನ್ನು ಖಂಡಿಸಿವೆ. ಉಭಯ ದೇಶಗಳು ಈ ಹೊತ್ತಿನಲ್ಲಿ ಸಂಯಮ ಕಾಯ್ದುಕೊಳ್ಳಬೇಕು ಎಂದು ಸಲಹೆ ಮಾಡಿವೆ.
ಇಸ್ರೇಲ್ ಸೇನೆ ಪ್ರಕಾರ, ಇರಾನ್ ಮೇಲೆ ನಡೆಸಿದ ಆರಂಭಿಕ ದಾಳಿಯಲ್ಲಿ 200 ಯುದ್ಧ ವಿಮಾನಗಳು ಬಳಕೆಯಾಗಿದ್ದು, 100 ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.
ಇರಾನ್‌ನ ಇಸ್‌ಫಹಾನ್‌ನ ಪರಮಾಣು ಸಂಶೋಧನಾ ಕೇಂದ್ರ, ನಟಾನ್ಜ್, ಫೋರ್ಡೊದಲ್ಲಿರುವ ಪ್ರಮುಖ ಅಣ್ವಸ್ತ್ರ ಸೌಲಭ್ಯಗಳ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಎಂದು ಇಸ್ರೇಲ್ ಪ್ರಕಟಿಸಿದೆ.
ಪ್ರಮುಖ ಪರಮಾಣು ಸೌಲಭ್ಯ ನಾಶ –ವಿಶ್ವಸಂಸ್ಥೆ
ದುಬೈ: ‘ಇರಾನ್‌ನ ಪ್ರಮುಖ ಪರಮಾಣು ಸೌಲಭ್ಯವನ್ನು ಇಸ್ರೇಲ್ ನಾಶ ಪಡಿಸಿದೆ’ ಎಂದು ವಿಶ್ವಸಂಸ್ಥೆಯ ಪರಮಾಣು ವಿಭಾಗದ ಮುಖ್ಯಸ್ಥ ರಫೇಲ್ ಗ್ರಾಸ್ ಪ್ರತಿಕ್ರಿಯಿಸಿದ್ದಾರೆ. ನಟಾನ್ಜ್‌ನಲ್ಲಿನ ಈ ನೆಲೆಯ ನೆಲಮಹಡಿ ಹೊರತುಪಡಿಸಿ ಕಟ್ಟಡದ ಉಳಿದ ಭಾಗ ಪೂರ್ಣ ಹಾನಿಯಾಗಿದೆ. ತುರ್ತು ವಿದ್ಯುತ್ ಉತ್ಪಾದನಾ ಸೌಲಭ್ಯವೂ ಹಾನಿಯಾಗಿದೆ. ಘಟಕದ ಕೇಂದ್ರ ಭಾಗಕ್ಕೆ ಹೆಚ್ಚಿನ ಧಕ್ಕೆಯಾಗಿಲ್ಲ. ವಿದ್ಯುತ್ ಪೂರೈಕೆ ವ್ಯವಸ್ಥೆಗೆ ತೀವ್ರ ಹಾನಿ ಆಗಿದ್ದು ಹೆಚ್ಚಿನ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿ ತಡೆಗೆ ಅಮೆರಿಕ ನೆರವು
ದುಬೈ: ಪ್ರತೀಕಾರವಾಗಿ ಇಸ್ರೇಲ್ ಗುರಿಯಾಗಿಸಿ ಇರಾನ್ ಪ್ರಯೋಗಿಸುತ್ತಿರುವ ಕ್ಷಿಪಣಿಗಳ ತಡೆದುರುಳಿಸಲು ಅಮೆರಿಕ ಸೇನೆ ನೆರವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಗಡಿಯಲ್ಲಿ ಸೇನೆ ಸೌಲಭ್ಯಗಳನ್ನು ಅಮೆರಿಕ ನೆಲೆಯೂರಿಸುತ್ತಿದೆ. ಈ ವಲಯದಲ್ಲಿ ಅಗತ್ಯ ರಕ್ಷಣೆ ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದೆ.
ಗಾಜಾ ಪಟ್ಟಿ: ಇಸ್ರೇಲ್ ದಾಳಿಗೆ 16 ಬಲಿ
ದೇರ್ ಅಲ್ ಬಲಾಹ್ (ಗಾಜಾ ಪಟ್ಟಿ): ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ದಾಳಿ ಮುಂದುವರಿಸಿದ್ದು ಕನಿಷ್ಠ 16 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ. ಇಸ್ರೇಲ್ ಮತ್ತು ಅಮೆರಿಕ ಬೆಂಬಲಿತ ಆಹಾರ ವಿತರಣೆ ಕೇಂದ್ರಗಳ ಮೇಲೆ ನಡೆದ ದಾಳಿ ಸಂದರ್ಭದಲ್ಲಿ 11 ಮಂದಿ ಪ್ಯಾಲೆಸ್ಟೀನಿಯರು ಸತ್ತಿದ್ದಾರೆ. ಇಸ್ರೇಲ್ ಸೇನೆ ಜನಸಮೂಹವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಸ್ರೇಲ್ ಸೇನೆ ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.