ADVERTISEMENT

ಅಮೆರಿಕದ ಬೇಹುಗಾರ ಡ್ರೋನ್ ಹೊಡೆದುರುಳಿಸಿದ ಇರಾನ್‌

ಏಜೆನ್ಸೀಸ್
Published 20 ಜೂನ್ 2019, 12:21 IST
Last Updated 20 ಜೂನ್ 2019, 12:21 IST
ರಾಯಿಟರ್ಸ್‌ ಚಿತ್ರ
ರಾಯಿಟರ್ಸ್‌ ಚಿತ್ರ   

ಟೆಹರಾನ್‌: ಹೊರ್‌ಮಾಜ್ಗನ್‌ ಪ್ರಾಂತದಲ್ಲಿ ಇರಾನ್‌ ವಾಯುಪ್ರದೇಶ ಉಲ್ಲಂಘಿಸಿದಅಮೆರಿಕದ ಬೇಹುಗಾರ(ಸ್ಪೈ)ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಗುರುವಾರ ತಿಳಿಸಿದೆ.

ಸಮುದ್ರದಲ್ಲಿ ವಾಯುಪ್ರದೇಶ ಉಲ್ಲಂಘಿಸಿ ಬಂದಿದ್ದ ಅಮೆರಿಕ ನಿರ್ಮಿತ ಗ್ಲೋಬಲ್‌ ಹಾಕ್‌ ಕಣ್ಗಾವಲು ಡ್ರೋನ್‌ ಅನ್ನು ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಗಾರ್ಡ್‌ ತಿಳಿಸಿದೆ. ಈ ಕುರಿತು ಅಮೆರಿಕ ಪ್ರತಿಕ್ರಿಯೆ ನೀಡಿಲ್ಲ. ಇರಾನ್‌ ಸೇನೆಯೂ ಡ್ರೋನ್‌ನ ಚಿತ್ರವನ್ನು ಇಲ್ಲಿಯವರೆಗೂ ಪ್ರಕಟಿಸಿಲ್ಲ.

‘ಈ ಕಾರ್ಯಾಚರಣೆ ಮೂಲಕ ತನ್ನ ಗಡಿಯನ್ನು ಇರಾನ್‌ ರಕ್ಷಿಸಿಕೊಳ್ಳಲಿದೆ ಎನ್ನುವ ಸ್ಪಷ್ಟ ಸಂದೇಶ ಇದಾಗಿದೆ’ ಎಂದು ಗಾರ್ಡ್‌ ಮುಖ್ಯಸ್ಥ ಹುಸೈನ್‌ ಸಲಾಮಿ ತಿಳಿಸಿದ್ದಾರೆ. ‘ನಾವು ಯುದ್ಧ ಬಯಸುತ್ತಿಲ್ಲ. ಆದರೆ ಯಾರಾದರೂ ಯುದ್ಧ ಘೋಷಿಸಿದರೆ ನಾವು ಸನ್ನದ್ಧರಾಗಿದ್ದೇವೆ’ ಎಂದು ಸ್ಥಳೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಗಲ್ಫ್‌ ಶಿಪ್ಪಿಂಗ್‌ ದಾಳಿ ನಂತರದಲ್ಲಿ ಎರಡೂ ದೇಶಗಳು ನಡುವೆ ವೈಷಮ್ಯ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಹಡಗುಗಳ ಮೇಲಿನ ದಾಳಿಗೆ ತೆಹ್ರಾನ್‌ ಕಾರಣ ಅಮೆರಿಕ ದೂಷಿಸಿತ್ತು.

ಕಳೆದ ವರ್ಷ ಮೇನಲ್ಲಿಇರಾನ್‌ ಜೊತೆಗಿನ 2015ರ ಪರಮಾಣು ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರದ್ದುಗೊಳಿಸಿದ ಬಳಿಕ ಉಭಯ ದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿತ್ತು.ಅಮೆರಿಕದ ಬಿ–52 ಬಾಂಬರ್‌ ವಿಮಾನಗಳು, ಯುದ್ಧ ನೌಕೆಗಳು ಗಲ್ಫ್‌ ಪ್ರದೇಶದಲ್ಲಿ ನಿಯೋಜಿಸಿದ ಬಳಿಕ ಯುದ್ಧದ ಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.